ಆಳ ಸಮುದ್ರದ ಮೀನುಗಾರಿಕೆಗೆ ಹೋಗಿದ್ದ ಯಾಂತ್ರಿಕೃತ ದೋಣಿ ತದಡಿಯ ಅಳವಿನ ಪ್ರದೇಶದಲ್ಲಿ ಮುಳುಗಡೆಯಾಗಿದೆ. ಈ ದೋಣಿಯಲ್ಲಿ ನಾಲ್ವರು ಮೀನುಗಾರರಿದ್ದು, ಇನ್ನೊಂದು ದೋಣಿಯಲ್ಲಿದ್ದ ಮೀನುಗಾರರು ಅವರನ್ನು ರಕ್ಷಿಸಿದ್ದಾರೆ.
ಸದ್ಯ ಅರಬ್ಬಿ ಸಮುದ್ರದಲ್ಲಿ ಅಲೆಗಳ ಅಬ್ಬರ ಜೋರಾಗಿದೆ. ಹೀಗಾಗಿ ಅಲ್ಲಿ ಅವಘಡಗಳು ನಡೆಯುತ್ತಿದ್ದು, ಭಾನುವಾರವೂ ದೋಣಿಯೊಂದು ಅಲೆಗಳಿಗೆ ಸಿಕ್ಕಿ ಬಿದ್ದಿದೆ. ಕಿಮಾನಿಯ ಮೋಹನ ಕೃಷ್ಣಪ್ಪ ಹರಿಕಾಂತ ಅವರ ಒಡೆಯನದ ಶ್ರೀದೇವಿ ಎಂಬ ದೋಣಿಯಲ್ಲಿ ಮೋಹನ ಹರಿಕಂತ್ರ ಅವರ ಜೊತೆ ಶಂಕರ ನಾಗಪ್ಪ ಹರಿಕಾಂತ, ಈರಾ ಶಿವು ಹರಿಕಾಂತ, ಮುಂಜುನಾಥ ಅಜ್ಜಪ್ಪ ಹರಿಕಾಂತ ಅವರು ಮೀನುಗಾರಿಕೆಗೆ ಹೋಗಿದ್ದರು. ಮೀನುಗಾರಿಕೆ ಮುಗಿಸಿ ಮರಳುವಾಗ ಆ ದೋಣಿಯೊಳಗೆ ನೀರು ತುಂಬಲು ಶುರುವಾಯಿತು. ಪರಿಣಾಮ ಶ್ರೀದೇವಿ ಎಂಬ ದೋಣಿ ಮುಳುಗಲು ಶುರುವಾಗಿದ್ದು, ತಕ್ಷಣ ಆ ದೋಣಿಯಲ್ಲಿದ್ದವರು ಸಹಾಯಕ್ಕಾಗಿ ಕಿರುಚಿದರು.
ಸಮೀಪವಿದ್ದ ಮತ್ತೊಂದು ದೋಣಿಯವರು ಈ ದುರಂತ ಗಮನಿಸಿದ್ದು, ಇನ್ನೊಂದು ದೋಣಿಯ ಸಹಾಯಪಡೆದು ಅಲ್ಲಿಗೆ ಧಾವಿಸಿದರು. ಅಲೆಗಳ ಅಬ್ಬರ ಜೋರಾಗಿದ್ದರೂ ಸಾಹಸ ಮಾಡಿ ಅಪಾಯದಲ್ಲಿದ್ದ ದೋಣಿಯವರನ್ನು ತಮ್ಮ ದೋಣಿಗೆ ಹತ್ತಿಸಿಕೊಂಡರು. ಇಡಗುಂಜಿ ವಿನಾಯಕ ಬೋಟ್‌ನ ನಾಗರಾಜ ಗಣಪತಿ ಹರಿಕಂತ, ಗುರುಬ್ರಹ್ಮ ಬೋಟನ್ ಸಂಜಯ ಹರಿಕಾಂತ್ ಮೂಡಂಗಿ ಹಾಗೂ ಸ್ಥಳೀಯ ಮೀನುಗಾರರು ಸೇರಿ ಅಪಾಯದಲ್ಲಿದ್ದ ನಾಲ್ವರನ್ನು ಬದುಕಿಸಿದರು. ರಕ್ಷಣೆಗೆ ಒಳಗಾದವರನ್ನು ತದಡಿ ಬಂದರಿಗೆ ಕರೆತಂದು ನಂತರ ಆಸ್ಪತ್ರೆಗೆ ದಾಖಲಿಸಿದರು.