ಕುಮಟಾದಲ್ಲಿ ಈ ದಿನ ಅದ್ಧೂರಿ ಈದ್ ಮೆರವಣಿಗೆ ನಡೆದಿದ್ದು, ಗುಡಿಗಾರ ಗಲ್ಲಿಯ ಸಾರ್ವಜನಿಕ ಗಣೇಶೋತ್ಸವ ಸಮಿತಿಯವರು ಮೆರವಣಿಗೆಯಲ್ಲಿ ಭಾಗವಹಿಸಿದವರಿಗೆ ಸಿಹಿ ತಿನಿಸು ವಿತರಿಸಿದ್ದಾರೆ. ಆ ಮೂಲಕ ಕುಮಟಾದ ಜನ ಹಿಂದೂ-ಮುಸ್ಲೀಂ ಸೌಹಾರ್ದತೆಯನ್ನು ಸಾರಿದ್ದಾರೆ.
ಕುಮಟಾದಲ್ಲಿ ಮೊದಲಿನಿಂದಲೂ ಈದ್ ಮಿಲಾದ್ ಹಬ್ಬದ ದಿನ ಹಿಂದೂ ಸಮುದಾಯದವರು ಮುಸ್ಲಿಂ ಸಮುದಾಯದವರಿಗೆ ಸಿಹಿ ತಿನಿಸು ಹಂಚುತ್ತಿದ್ದಾರೆ. ಅದರಂತೆ, ಗಣೇಶ ಚತುರ್ಥಿ ಅವಧಿಯಲ್ಲಿ ಮುಸ್ಲಿಂ ಸಮುದಾಯದವರು ಹಬ್ಬಕ್ಕೆ ಆಗಮಿಸಿ ಪ್ರಸಾದಪಡೆಯುತ್ತಾರೆ. ಆ ಪದ್ಧತಿ ಈ ವರ್ಷವೂ ಮುಂದುವರೆದಿದ್ದು, ಸುವರ್ಣ ಮಹೋತ್ಸವದ ಹೊಸ್ತಲಿನಲ್ಲಿರುವ ಗುಡಿಗಾರ ಗಲ್ಲಿಯ ಸಾರ್ವಜನಿಕ ಗಣೇಶೋತ್ಸವ ಸಮಿತಿಯವರು ಈದ್ ಮಿಲಾದ್ ಮೆರವಣಿಗೆಯಲ್ಲಿದ್ದವರಿಗೆ ಸಿಹಿ ತಿನಿಸು ಹಾಗೂ ತಂಪು ಪಾನೀಯ ನೀಡಿದ್ದಾರೆ.
ಕುಮಟಾದ ಹಳಕಾರ ದರ್ಗಾದಿಂದ ಕುಮಟಾ ಪಟ್ಟಣದಲ್ಲಿ ಈದ್ ಮಿಲಾದ್ ಮೆರವಣಿಗೆ ಸಂಚರಿಸಿದೆ. ಅದೇ ಮಾರ್ಗವಾಗಿ ಕಾದ ಸಾರ್ವಜನಿಕ ಗಣೇಶೋತ್ಸವ ಸಮಿತಿಯವರು ಮೆರವಣಿಗೆಯಲ್ಲಿದ್ದವರನ್ನು ಮಾತನಾಡಿಸಿ, ಸಡಗರವ್ಯಕ್ತಪಡಿಸಿದ್ದಾರೆ. ನಂತರ ಅವರು ಹಬ್ಬಕ್ಕೆ ಶುಭ ಕೋರಿದ್ದಾರೆ. ಅದಾದ ಮೇಲೆ ಎರಡು ಸಮುದಾಯದವರು ಸೇರಿ ಕುಮಟಾ ಸರ್ಕಾರಿ ಆಸ್ಪತ್ರೆಗೆ ಹೋಗಿದ್ದು, ಅಲ್ಲಿ ದಾಖಲಾದ ರೋಗಿಗಳಿಗೆ ಹಣ್ಣುಗಳನ್ನು ವಿತರಿಸಿದ್ದಾರೆ. ಗಣೇಶೋತ್ಸವ ಸಮಿತಿ ಅಧ್ಯಕ್ಷ ಲಕ್ಷ್ಮಣ ನಾಯ್ಕ, ಸಮಿತಿ ಪ್ರಮುಖರಾದ ರಾಜು ನಾಯ್ಕ, ರಾಘವೇಂದ್ರ ನಾಯ್ಕ, ಮಂಜುನಾಥ ನಾಯ್ಕ, ಗುರುಪ್ರಸಾದ ನಾಯ್ಕ, ವಾಸು ನಾಯ್ಕ, ವಿನಾಯಕ ನಾಯ್ಕ, ಮಾರುತಿ ನಾಯ್ಕ, ಶ್ರೀಧರ ಕುಮಟಾಕರ, ಗೀರಿಶ ನಾಯ್ಕ, ಪ್ರಕಾಶ ನಾಯ್ಕ ಹಾಗೂ ಯೋಗಿ ನಾಯ್ಕ ಅವರು ಈ ವೇಳೆ ಹಾಜರಿದ್ದರು.