ಅದ್ಧೂರಿ ಸ್ವಾತಂತ್ರ‍್ಯೋತ್ಸವ ಆಚರಣೆಗಾಗಿ ಕಂಪನಿ ನೀಡಿದ ರಜೆಯನ್ನು ದುರುಪಯೋಗಪಡಿಸಿಕೊಂಡ ಕೆಲವರು ಮುರುಡೇಶ್ವರಕ್ಕೆ ಆಗಮಿಸಿದ್ದಾರೆ. ಇಲ್ಲಿ ಮೋಜು-ಮಸ್ತಿಯಲ್ಲಿ ತೊಡಗಿ ಮಾದಕ ವ್ಯಸನ ಸೇವಿಸಿದವರು ಪೊಲೀಸರ ಬಳಿ ಸಿಕ್ಕಿಬಿದ್ದಿದ್ದಾರೆ.
ಹುಬ್ಬಳ್ಳಿಯ ಕೆ.ಎಚ್.ಬಿ ಜಡ್ಜ್ ಕಾಲೋನಿ 4ನೇ ಕ್ರಾಸ್ ನಿವಾಸಿ ಮಹಾಂತೇಶ ಯಮನಪ್ಪ ಜಿನಗಿ ಹಾಗೂ ಹುಬ್ಬಳ್ಳಿಯ ಗೊಪನಕೊಪ್ಪ ನಿವಾಸಿ ಕಾರ್ತಿಕ ಶಂಕರ ಜಗದಾಳೆ ಅವರು ಖಾಸಗಿ ಕಂಪನಿ ಉದ್ಯೋಗಿಯಾಗಿದ್ದು, ಕಂಪನಿಗೆ ರಜೆ ಇದ್ದ ಹಿನ್ನಲೆ ಮುರುಡೇಶ್ವರಕ್ಕೆ ಬಂದಿದ್ದರು. ಅಗಸ್ಟ 15ರ ರಾತ್ರಿ 9.30ಕ್ಕೆ ಮುರುಡೇಶ್ವರದ ಮಹತೋಬಾರ ದೇವಸ್ಥಾನದ ಸಮೀಪದ ಬಲಬದಿಯ ಸಮುದ್ರದಲ್ಲಿ ಅವರು ಗಾಂಜಾ ಸೇವಿಸಿ ಅಲೆದಾಡುತ್ತಿದ್ದರು.
ಹುಬ್ಬಳ್ಳಿಯ ಉಣಕಲ್ ಸಾಯಿನಗರ ನಿವಾಸಿ, ಟೆಕ್ನಿಷಿಯನ್ ಸುನೀಲ್ ರಮೇಶ ಕೋಟಿ ಹಾಗೂ ಧಾರವಾಡ ಜಿಲ್ಲೆಯ ಹೆಬ್ಬಳ್ಳಿ ನಿವಾಸಿ ಚೈತನ್ಯ ಸುಧೀರ ಬೆಟಗೇರಿ ಅವರು ಸಹ ರಾತ್ರಿ 10 ಗಂಟೆಗೆ ಸಮುದ್ರದ ಎಡಭಾಗದಲ್ಲಿ ಅಲೆದಾಡುತ್ತಿದ್ದರು. ಅವರು ಸಹ ಮಾದಕ ವ್ಯಸನ ಸೇವಿಸಿದ್ದು, ಅನುಚಿತವಾಗಿ ವರ್ತಿಸುತ್ತಿದ್ದವರನ್ನು ಪೊಲೀಸರು ವಿಚಾರಣೆ ನಡೆಸಿದರು. ಈ ವೇಳೆ ಹುಬ್ಬಳ್ಳಿಯ ಅಮರಗೋಳ ನಿವಾಸಿ ಸುನೀಲ್ ಕುಮಾರ್ ಯಮನಪ್ಪ ಜಿನಗಿ ಹಾಗೂ ಗದಗ ಜಿಲ್ಲೆಯ ಕಲ್ಲೂರು ನಿವಾಸಿ ವಿನಾಯಕ ವೆಂಕಪ್ಪ ಮುಶಣ್ಣವರ ಸಹ ತೂದಳ್ಳಿ ರಸ್ತೆಯ ಮೀನು ಮಾರುಕಟ್ಟೆ ಸಮೀಪದ ಸಾರ್ವಜನಿಕ ಸ್ಥಳದಲ್ಲಿ ಗಲಾಟೆ ಮಾಡುತ್ತಿರುವುದನ್ನು ಪೊಲೀಸರು ಗಮನಿಸಿದರು. ಈ ಆರೂ ಜನರನ್ನು ವಶಕ್ಕೆಪಡೆದು ಭಟ್ಕಳ ತಾಲೂಕು ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ಪರೀಕ್ಷೆ ನಡೆಸಿದರು.
ಆಗ, ಅವರೆಲ್ಲರೂ ನಿಷೇಧಿತ ಗಾಂಜಾ ಸೇವಿಸಿದ್ದು ಗೊತ್ತಾಯಿತು. ಈ ಹಿನ್ನಲೆ ಆ ಆರು ಜನರ ವಿರುದ್ಧ ಮೂರು ಪ್ರತ್ಯೇಕ ಪ್ರಕರಣಗಳನ್ನು ಪೊಲೀಸರು ದಾಖಲಿಸಿದರು.