ಮಾರುತಿಗಲ್ಲಿಯ ಸೌಮ್ಯ ಹೆಬ್ಬಾಳ್ ಅವರ ಬಳಿಯಿದ್ದ ಚಿನ್ನದ ಉಂಗುರ ಕಾಣೆಯಾಗಿದ್ದು, ಪೊಲೀಸರು ಅದನ್ನು ಹುಡುಕಿ ಕೊಟ್ಟಿದ್ದಾರೆ. 70 ಸಾವಿರ ರೂ ಮೌಲ್ಯದ ಉಂಗುರ ಕಾಣೆಯಾಗಿದ್ದರಿಂದ ಗಲಿಬಿಲಿಗೊಂಡಿದ್ದ ಸೌಮ್ಯ ಹೆಬ್ಬಾಳ್ ಅವರು ಸದ್ಯ ನೆಮ್ಮದಿಯಿಂದ ಮನೆಗೆ ಮರಳಿದ್ದಾರೆ.
ಶಿರಸಿಯ ಮಾರುತಿಗಲ್ಲಿಯಲ್ಲಿ ಸೌಮ್ಯ ಹೆಬ್ಬಾಳ್ ಅವರು ವಾಸವಾಗಿದ್ದಾರೆ. ಅವರು ಮಾರುಕಟ್ಟೆಗೆ ಬಂದಾಗ ತಮ್ಮ ಕೈಯಲ್ಲಿದ್ದ ಉಂಗುರ ಕಳೆದುಕೊಂಡಿದ್ದು, ಕಾಣೆಯಾದ ಉಂಗುರದ ಬಗ್ಗೆ ತಲೆಕೆಡಿಸಿಕೊಂಡಿದ್ದರು. ಓಡಾಟ ನಡೆಸಿದ ಎಲ್ಲಾ ಭಾಗದಲ್ಲಿ ಸಂಚಾರ ನಡೆಸಿದರೂ ಆ ಉಂಗುರ ಮಾತ್ರ ಸಿಕ್ಕಿರಲಿಲ್ಲ. ಕಾಣೆಯಾದ ಉಂಗುರ ಬೆಲೆ ಬಾಳುವ ವಸ್ತುವಾಗಿದ್ದು, ಜೊತೆಗೆ ಸೌಮ್ಯ ಹೆಬ್ಬಾಳ್ ಅವರು ಆ ಉಂಗುರದ ಜೊತೆ ಭಾವನಾತ್ಮಕವಾಗಿಯೂ ಸಂಬoಧಹೊoದಿದ್ದರು. ಎಲ್ಲಿ ಹುಡುಕಿದರೂ ಉಂಗುರ ಸಿಗದ ಕಾರಣ ಅವರು ಪೊಲೀಸರ ಸಹಾಯ ಯಾಚಿಸಿದರು. ಉಂಗುರ ಕಾಣೆಯಾದ ಬಗ್ಗೆ ಅವರು ಶಿರಸಿ ಮಾರುಕಟ್ಟೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿದರು.
ಅತಿ ಚಿಕ್ಕದಾದ ಚಿನ್ನದ ಉಂಗುರ ಹುಡುಕುವುದು ಪೊಲೀಸರಿಗೆ ಸಹ ಸವಾಲಾಗಿತ್ತು. ಅದಾಗಿಯೂ, ಶಿರಸಿ ಮಾರುಕಟ್ಟೆ ಪೊಲೀಸ್ ಠಾಣೆ ಪಿಸೈ ಬಸವರಾಜ ಕನಶೆಟ್ಟಿ ಅವರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ವಿವಿಧ ಸಿಸಿ ಕ್ಯಾಮರಾ ದಾಖಲೆಗಳನ್ನು ಪರಿಶೀಲಿಸಿದರು. ಸೌಮ್ಯಾ ಹೆಬ್ಬಾಳ ಅವರು ಓಡಾಟ ನಡೆಸಿದ ಮಾರ್ಗವಾಗಿಯೂ ಶೋಧ ನಡೆಸಿದರು. ವಿವಿಧ ಆಯಾಮಗಳಲ್ಲಿ ಶೋಧ ನಡೆಸಿ ಸೌಮ್ಯ ಹೆಬ್ಬಾಳ ಅವರು ಕಳೆದುಕೊಂಡ ಉಂಗುರವನ್ನು ಪತ್ತೆ ಮಾಡಿದರು.
ಈ ದಿನ ಸೌಮ್ಯಾ ಹೆಬ್ಬಾಳ ಅವರನ್ನು ಪೊಲೀಸ್ ಠಾಣೆಗೆ ಕರೆಯಿಸಿ ಆ ಉಂಗುರ ಹಸ್ತಾಂತರಿಸಿದರು. ಬೆಲೆ ಬಾಳುವ ವಸ್ತುಗಳನ್ನು ಜೋಪಾನವಾಗಿರಿಸಿಕೊಳ್ಳುವಂತೆ ಕಿವಿಮಾತನ್ನು ಹೇಳಿದರು.