ವಾನಳ್ಳಿ ಬಳಿಯ ಮಂಜುನಾಥ ಗೌಡ ಅವರು ತಂದೆಯ ಆಸ್ತಿಯಲ್ಲಿ ಪಾಲು ಕೇಳಿ ಪೆಟ್ಟು ತಿಂದಿದ್ದಾರೆ. ಅವರನ್ನು ಹಗ್ಗದಿಂದ ಕಟ್ಟಿದ ತಿಮ್ಮ ಗೌಡ ಹಾಗೂ ಪುಟ್ಟ ಗೌಡ ಅವರು ಬಡಿಗೆಯಿಂದ ಬಡಿದಿದ್ದು, ಆ ನೋವು ಸಹಿಸಲಾಗದೇ ಮಂಜುನಾಥ ಗೌಡ ಅವರು ಮಹಾಲಕ್ಷ್ಮಿ ಆಸ್ಪತ್ರೆ ಸೇರಿದ್ದಾರೆ.
ಶಿರಸಿ ವಾನಳ್ಳಿ ಬಳಿಯ ಹಾವಿನಗದ್ದೆಯಲ್ಲಿ ಮಂಜುನಾಥ ಗೌಡ (36) ಅವರು ವಾಸವಾಗಿದ್ದಾರೆ. ಮಂಜುನಾಥ ಗೌಡ ಅವರ ತಂದೆ ಗಣಪತಿ ಗೌಡ ಅವರಿಗೆ ಎರಡು ಪತ್ನಿಯರಿದ್ದು, ಮಂಜುನಾಥ ಗೌಡ ಅವರು ಕಿರಿಯ ಪತ್ನಿಯ ಪುತ್ರರಾಗಿದ್ದಾರೆ. ಗಣಪತಿ ಗೌಡ ಅವರ ಮೊದಲ ಪತ್ನಿಗೆ ಪುಟ್ಟ ಗೌಡ (53) ಹಾಗೂ ತಿಮ್ಮ ಗೌಡ (55) ಎಂಬ ಮಕ್ಕಳಿದ್ದು, ಅವರಿಬ್ಬರಿಗೂ ಗಣಪತಿ ಗೌಡ ಅವರು ತಲಾ 1.15 ಎಕರೆ ಭೂಮಿ ಮಾಡಿಕೊಟ್ಟಿದ್ದಾರೆ. ಎರಡನೇ ಪತ್ನಿಯ ಪುತ್ರ ಮಂಜುನಾಥ ಗೌಡ ಅವರಿಗೆ ಬರೇ 30 ಗುಂಟೆ ಜಮೀನಿದ್ದು, ಸದ್ಯ ಗಣಪತಿ ಗೌಡ ಅವರ ಹೆಸರಿನಲ್ಲಿರುವ 24 ಗುಂಟೆ ಜಮೀನನ್ನು ತಮ್ಮ ಹೆಸರಿಗೆ ಬರೆಯಿಸಿಕೊಳ್ಳಲು ಮಂಜುನಾಥ ಗೌಡ ಅವರು ಚಿಂತನೆ ನಡೆಸಿದ್ದಾರೆ.
ಆದರೆ, ಗಣಪತಿ ಗೌಡ ಅವರ ಮೊದಲ ಪತ್ನಿ ಮಕ್ಕಳಿಬ್ಬರು ಇದಕ್ಕೆ ಅಡ್ಡಿಯಾಗಿದ್ದಾರೆ. ಹೇಗಾದರೂ ಮಾಡಿ ಆ 24 ಗುಂಟೆ ಭೂಮಿಯನ್ನು ತಾವೇ ಪಡೆಯಬೇಕು ಎಂದು ತಿಮ್ಮ ಗೌಡ ಹಾಗೂ ಪುಟ್ಟು ಗೌಡ ಸಂಚು ರೂಪಿಸಿದ್ದು, ಗಣಪತಿ ಗೌಡ ಅವರ ಬಳಿ ಮಂಜುನಾಥ ಗೌಡ ಅವರ ವಿರುದ್ಧ ಇಲ್ಲಸಲ್ಲದ ವಿಷಯ ಹೇಳುತ್ತಿದ್ದಾರೆ. `ಮಂಜುನಾಥ ಗೌಡ ಸರಿಯಿಲ್ಲ. ಆತ ಸರಾಯಿ ಕುಡಿಯುತ್ತಾನೆ’ ಎಂದು ಸಹ ಚಾಡಿ ಹೇಳಿದ್ದಾರೆ. ಇದರಿಂದ ಗಣಪತಿ ಗೌಡ ಅವರು ಸಹ ಗೊಂದಲಕ್ಕೀಡಾಗಿದ್ದು, ತಮ್ಮ ಜಮೀನಿನ ಮುಂದಿನ ವಾರಸುದಾರರ ಬಗ್ಗೆ ಸರಿಯಾಗಿ ನಿರ್ಧರಿಸಿಲ್ಲ.
ಜುಲೈ 28ರಂದು ಮಂಜುನಾಥ ಗೌಡ ಹಾಗೂ ಅವರ ತಂದೆ ಗಣಪತಿ ಗೌಡ ಅವರು ಮಾತನಾಡುತ್ತಿದ್ದಾಗ ಅಲ್ಲಿಗೆ ತಿಮ್ಮ ಗೌಡ ಹಾಗೂ ಪುಟ್ಟ ಗೌಡ ಅವರು ಬಂದಿದ್ದಾರೆ. ಅವರಿಬ್ಬರು ತಮ್ಮ ತಂದೆ ಗಣಪತಿ ಗೌಡ ಅವರನ್ನು ಉದ್ದೇಶಿಸಿ `ಆತನ ಬಳಿ ಏನು ಮಾತು?’ ಎಂದು ಪ್ರಶ್ನಿಸಿದ್ದಾರೆ. ಆಗ, ಮಂಜುನಾಥ ಗೌಡ ಅವರು `ನೀವಿಬ್ಬರು ಈಗಾಗಲೇ ಜಮೀನಿನಲ್ಲಿ ಜಾಸ್ತಿ ಪಾಲು ಪಡೆದಿದ್ದೀರಾ. ಮತ್ತೆ ಪಾಲು ಸಿಗಲ್ಲ’ ಎಂದಿದ್ದಾರೆ. ಇದರಿಂದ ಕೆರಳಿದ ತಿಮ್ಮಾ ಗೌಡ ಹಾಗೂ ಪುಟ್ಟ ಗೌಡ ಹಗ್ಗ ತಂದು ಮಂಜುನಾಥ ಗೌಡ ಅವರನ್ನು ಕಟ್ಟಿ ಹಾಕಿದ್ದಾರೆ. ನಂತರ ಬಡಿಗೆಯಿಂದ ಬಡೆದಿದ್ದಾರೆ. ಈ ನೋವಿನಿಂದ ಬಳಲಿದ ಮಂಜುನಾಥ ಗೌಡ ಅವರು ಮಹಾಲಕ್ಷ್ಮಿ ಆಸ್ಪತ್ರೆ ಸೇರಿ, ಚಿಕಿತ್ಸೆಪಡೆಯುತ್ತಿದ್ದಾರೆ.