ಅಪ್ರಾಪ್ತೆ ಮೇಲಿನ ಅತ್ಯಾಚಾರ ಆರೋಪಿ ಗೌರೀಶ ಮುಕ್ರಿ ಅವರಿಗೆ ಆರು ಜನ ಆಶ್ರಯ ನೀಡಿದ್ದಾರೆ. ಆ ಆರು ಜನ ನಡೆಸಿದ ಹುನ್ನಾರದಿಂದ ಗೌರೀಶ ಮುಕ್ರಿ ಅವರು ಪೊಲೀಸರಿಗೆ ಸಿಗದೇ ತಪ್ಪಿಸಿಕೊಳ್ಳುತ್ತಿದ್ದಾರೆ.
ಕುಮಟಾದ ಹೆಗಡೆಯ ಚಿಟ್ಟಿಕಂಬಿಯಲ್ಲಿ ಗೌರೀಶ ಸುಬ್ರಾಯ ಮುಕ್ರಿ ಅವರು ವಾಸವಾಗಿದ್ದರು. 24 ವರ್ಷದ ಅವರು ಚಾಲಕರಾಗಿ ಜೀವನ ನಡೆಸುತ್ತಿದ್ದು, ಅತ್ಯಂತ ಕಾಮುಕ ಸ್ವಭಾವಹೊಂದಿದ್ದರು. ಅಪ್ರಾಪ್ತೆಯೊಬ್ಬರ ಮೇಲೆ ಅತ್ಯಾಚಾರ ನಡೆಸಿದ ಪ್ರಕರಣದಲ್ಲಿ ಅವರು ಆರೋಪಿಯಾಗಿದ್ದರು. ಈ ವರ್ಷವೇ ಅವರ ವಿರುದ್ಧ ಕುಮಟಾದಲ್ಲಿ ಪೊಲೀಸ್ ಕೇಸು ದಾಖಲಾಗಿದ್ದು, ಗೌರೀಶ ಮುಕ್ರಿ ಅವರ ನೀಚಕೃತ್ಯದ ಬಗ್ಗೆ ಕಾರವಾರದ ಮಕ್ಕಳ ಸ್ನೇಹಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿತ್ತು. ಆದರೆ, ಗೌರೀಶ ಮುಕ್ರಿ ಮಾತ್ರ ಪೊಲೀಸರಿಗೆ ಸಿಕ್ಕಿರಲಿಲ್ಲ. ನ್ಯಾಯಾಲಯಕ್ಕೆ ಸಹ ಹಾಜರಾಗುತ್ತಿರಲಿಲ್ಲ.
ಬಾಲ್ಯ ವಿವಾಹ ಪ್ರಕರಣದಲ್ಲಿ ಸಹ ಗೌರೀಶ ಮುಕ್ರಿ ಅವರ ವಿರುದ್ಧ ಆರೋಪಗಳಿದ್ದು, ಕುಮಟಾ ಪೊಲೀಸರು ನ್ಯಾಯಾಲಯಕ್ಕೆ ಸಮಗ್ರ ವರದಿ ಸಲ್ಲಿಸಿದ್ದರು. ವಿವಿಧ ದಾಖಲೆಗಳ ಆಧಾರದಲ್ಲಿ ದೋಷಾರೋಪಣ ಪಟ್ಟಿಯನ್ನು ಒಪ್ಪಿಸಿದ್ದರು. ಗೌರೀಶ ಮುಕ್ರಿ ಅವರ ದೋಷಾರೋಪಣಪಟ್ಟಿ ಗಮನಿಸಿದ ನ್ಯಾಯಾಲಯ ವಾರೆಂಟ್ ಜಾರಿ ಮಾಡಿದ್ದು, ಆರೋಪಿಗಾಗಿ ಕುಮಟಾ ಪೊಲೀಸರು ತೀವೃ ಶೋಧ ನಡೆಸಿದರು. ಅಲ್ಲಿ ಯಾವ ಮಾಹಿತಿಯೂ ಸಿಗಲಿಲ್ಲ. ಅದಾದ ನಂತರ ಕುಮಟಾ ಪಿಐ ಯೋಗೇಶ ಕೆ ಎಂ ಅವರು ಪೊಲೀಸ್ ಸಿಬ್ಬಂದಿ ಗಣೇಶ ನಾಯ್ಕ, ಸಂತೋಷ ಚಿನ್ನಣ್ಣನವರ್, ಗುರು ನಾಯಕ ಅವರ ಜೊತೆ ಅಳ್ವೆಕೊಡಿಯ ಕಡೆ ಹುಡುಕಾಟ ನಡೆಸಿದರು. ಅಳ್ವೇಕೊಡಿ, ಹಂದಿಗೋಣ, ಧಾರೇಶ್ವರ, ಹೊಳಗದ್ದೆ ಕಡೆ ಗೌರೀಶ ಮುಕ್ರಿ ಅವರ ಬಗ್ಗೆ ವಿಚಾರಿಸಿದರು. ಆದರೆ, ಅಲ್ಲಿಯೂ ಪೊಲೀಸರಿಗೆ ಕಿಂಚಿತ್ತು ಸುಳಿವು ದೊರೆಯಲಿಲ್ಲ.
ಆರೋಪಿ ಗೌರೀಶ ಮುಕ್ರಿ ಅವರು ಹೊನ್ನಾವರದ ಚಂದಾವರ ನಾಕಾ ಬಳಿಯ ನರಸಿಂಹ ತಿಮ್ಮಪ್ಪ ಮುಕ್ರಿ ಮನೆಯಲ್ಲಿ ಅಡಗಿರುವುದಾಗಿ ಸಂಜೆ ವೇಳೆ ಪೊಲೀಸರಿಗೆ ಬಂದ ಮಾಹಿತಿ ಬಂದಿತು. ಅದರನ್ವಯ ಪೊಲೀಸರ ಜೀಪು ಚಂದಾವರ ನಾಕಾದ ಕಡೆ ತಿರುಗಿತು. ಆಗ, ರಸ್ತೆ ಮೇಲೆ ಆಡುತ್ತಿದ್ದ ಹುಡುಗರಿಬ್ಬರು ಅಲ್ಲಿಂದ ಓಡಿದರು. ಪೊಲೀಸರನ್ನು ಕಂಡು ಓಡಿದ ಹುಡುಗರನ್ನು ಪಿಐ ಯೋಗೇಶ ಎಂ ಕೆ ಹಾಗೂ ಅವರ ತಂಡದಲ್ಲಿದ್ದ ಗಣೇಶ ನಾಯ್ಕ, ಸಂತೋಷ ಚಿನ್ನಣ್ಣನವರ್, ಗುರು ನಾಯಕ ಅವರು ಬೆನ್ನತ್ತಿದರು. ಆ ಹುಡುಗು ನೇರವಾಗಿ ನರಸಿಂಹ ಮುಕ್ರಿ ಅವರ ಮನೆಗೆ ಹೋಗಿ ಪೊಲೀಸರು ಆಗಮಿಸಿದ ಸುದ್ದಿ ಮುಟ್ಟಿಸಿದರು. ಆಗ, ಅಲ್ಲಿ ಅಡಗಿದ್ದ ಗೌರೀಶ ಮುಕ್ರಿ ಕಾಡಿನ ದಾರಿ ಹಿಡಿದು ಓಡಿ ಪರಾರಿಯಾದರು. ಸಂಜೆ 6 ಗಂಟೆ ದಾಟಿದ್ದರಿಂದ ಕಾಡಿನಲ್ಲಿ ಶೋಧ ನಡೆಸಲು ಪೊಲೀಸರ ಬಳಿ ಸಾಧ್ಯವಾಗಲಿಲ್ಲ.
ಹೊನ್ನಾವರದ ಚಂದಾವರ ನಾಕಾ ಬಳಿಯ ಶಶಿಧರ ನರಸಿಂಹ ಮುಕ್ರಿ, ಅಂತೋನಿ ಮಿಲಾಗ್ರಿಸ್ ಫರ್ನಾಂಡಿಸ್, ನರಸಿಂಹ ತಿಮ್ಮಪ್ಪ ಮುಕ್ರಿ, ಸುಶೀಲಾ ನರಸಿಂಹ ಮುಕ್ರಿ, ಕುಮಟಾ ಹೆಗಡೆಯ ಚಿಟ್ಟಿಕಂಬಿಯ ಶೋಭಾ ನರಸಿಂಹ ಮುಕ್ರಿ ಹಾಗೂ ಕುಮಟಾ ಹಂದಿಗೋಣದ ವಿನಾಯಕ ಜಟ್ಟಿ ಮುಕ್ರಿ ಸೇರಿ ಅಪ್ರಾಪ್ತೆ ಮೇಲಿನ ಅತ್ಯಾಚಾರ ಆರೋಪಿ ಗೌರೀಶ ಮುಕ್ರಿ ಅವರನ್ನು ರಕ್ಷಣೆ ಮಾಡುತ್ತಿರುವುದು ಪೊಲೀಸರಿಗೆ ದೃಢವಾಯಿತು. ಈ ಹಿನ್ನಲೆ ಆರೋಪಿಗೆ ಆಶ್ರಯ ನೀಡಿದ ಅವರೆಲ್ಲರ ವಿರುದ್ಧವೂ ಪಿಐ ಯೋಗೇಶ ಕೆ ಎಂ ಅವರು ಕಾನೂನು ಕ್ರಮ ಜರುಗಿಸಿದರು. ಆ ದಿನವೇ ಹೊನ್ನಾವರ ಪೊಲೀಸ್ ಠಾಣೆಗೆ ಹೋದ ಯೋಗೇಶ ಕೆ ಎಂ ಅವರು ಆ ಆರು ಜನರ ಹೆಸರು-ವಿಳಾಸ ನೀಡಿ ಕೇಸು ದಾಖಲಿಸಿದರು. ಸದ್ಯ ಆರೋಪಿಗೆ ಆಶ್ರಯ ನೀಡಿದ ತಪ್ಪಿಗೆ ಸ್ನೇಹಿತರು-ಸಂಬoಧಿಕರು ಸಮಸ್ಯೆಗೆ ಸಿಲುಕಿದ್ದಾರೆ.
`ಆರೋಪಿಗೆ ಆಶ್ರಯ ನೀಡುವುದು ಅಪರಾಧ’