ಗೋವಾದಲ್ಲಿ ಕ್ಯಾಸಿನೋ ನಡೆಸುವ ಯಲ್ಲಾಪುರ ಮೂಲದ ಶ್ರೀನಿವಾಸ ನಾಯಕ ಅವರ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ ಶ್ರೀನಿವಾಸ ನಾಯ್ಕ ಅವರು ತಕ್ಷಣ ಹೊಟೇಲ್ ಒಳಗೆ ನುಗ್ಗಿ ಪ್ರಾಣ ಉಳಿಸಿಕೊಂಡಿದ್ದಾರೆ.
ಶ್ರೀನಿವಾಸ ನಾಯಕ ಅವರು ಯಲ್ಲಾಪುರ ಮೂಲದವರು. ರಾಮನಾಥ ಡೆವಲಪರ್ಸನ ಬಾಲು ನಾಯಕ ಅವರ ಸಹೋದರ. ಬಾಲ್ಯವನ್ನು ಯಲ್ಲಾಪುರದಲ್ಲಿಯೇ ಕಳೆದ ಶ್ರೀನಿವಾಸ ನಾಯಕ ಅವರು ನಂತರ ಗೋವಾಗೆ ಹೋಗಿ ನೆಲೆಸಿದ್ದು, ಅಲ್ಲಿಯೇ ತಮ್ಮ ಕುಟುಂಬದವರ ಜೊತೆ ವಾಸವಾಗಿದ್ದಾರೆ. ಜೊತೆಗೆ ಅವರು ಗೋವಾದಲ್ಲಿ ಕ್ಯಾಸಿನೋ ಮೆಜೆಸ್ಟಿಕ್’ನ ನಿರ್ದೇಶಕರಾಗಿದ್ದಾರೆ.
ಶುಕ್ರವಾರ ರಾತ್ರಿ ಶ್ರೀನಿವಾಸ ನಾಯಕ ಅವರನ್ನು ಕೊಲೆ ಮಾಡುವ ಉದ್ದೇಶದಿಂದ ವ್ಯಕ್ತಿಗಳಿಬ್ಬರು ದಾಳಿ ಮಾಡಿದ್ದಾರೆ. ಅವರು ಕಾರು ಹತ್ತುವ ವೇಳೆ ದಿಢೀರ್ ಆಗಿ ಆಗಮಿಸಿದ ಆಗಂತುಕರು ಪಿಸ್ತೂಲು ತೆಗೆದು ಗುಂಡು ಹಾರಿಸಿದ್ದಾರೆ. ಈ ವೇಳೆ ಶ್ರೀನಿವಾಸ ನಾಯಕ ಅವರ ಜೊತೆಗಿದ್ದ ಭದ್ರತಾ ಸಿಬ್ಬಂದಿ ಪ್ರತಿ ದಾಳಿ ಮಾಡಿದ್ದು, ತಕ್ಷಣ ಆ ಆಗಂತುಕರು ಪಿಸ್ತೂಲು ತೋರಿಸುತ್ತಲೇ ಅಲ್ಲಿಂದ ಪರಾರಿಯಾಗಿದ್ದಾರೆ. ಪೋರ್ವೊರಿಮ್ ಪೊಲೀಸ್ ಠಾಣೆ ಮತ್ತು ಉತ್ತರ ಗೋವಾ ಎಸ್‌ಪಿ ಕೇಂದ್ರ ಕಚೇರಿಯಿಂದ 100 ಮೀಟರ್ ದೂರದಲ್ಲಿ ಈ ಗುಂಡಿನ ಕಾಳಗ ನಡೆದಿದೆ.
ಸಮೀಪದ ಹೊಟೇಲಿನ ಸಿಸಿ ಕ್ಯಾಮರಾದಲ್ಲಿ ದುಷ್ಕರ್ಮಿಗಳ ಚಹರೆ ಪತ್ತೆಯಾಗಿದೆ. ಆ ಅಪರಿಚಿತರು ಒಟ್ಟು ಮೂರು ಸುತ್ತಿನಲ್ಲಿ ಗುಂಡು ಹಾರಿಸಿದ್ದು, ನಂತರ ಹೆದ್ದಾರಿ ದಾಟಿ ಪರಾರಿಯಾಗಿದ್ದಾರೆ. ಸದಾ ಜನ ಓಡಾಡುವ ಪ್ರದೇಶದಲ್ಲಿಯೇ ಏಕಾಏಕಿ ಈ ದಾಳಿ ನಡೆದಿದ್ದರಿಂದ ಗೋವಾ ತಲ್ಲಣಗೊಂಡಿದೆ. ಆದರೆ, ಅವರು ಯಾರು? ಎಲ್ಲಿನವರು ಎಂದು ಈವರೆಗೂ ಗೊತ್ತಾಗಿಲ್ಲ. ಯಾವ ಉದ್ದೇಶಕ್ಕಾಗಿ ಅವರು ದಾಳಿ ಮಾಡಿದರೂ ಎನ್ನುವುದರ ಬಗ್ಗೆಯೂ ಮಾಹಿತಿ ಸಿಕ್ಕಿಲ್ಲ.
`ಶಂಕಿತರ ಪತ್ತೆಗೆ ಶ್ರಮಿಸಲಾಗುತ್ತಿದೆ. ದಾಳಿಯ ಹಿಂದಿನ ಸಂಚನ್ನು ಬಯಲು ಮಾಡುತ್ತೇವೆ’ ಎಂದು ಉತ್ತರ ಗೋವಾ ಎಸ್‌ಪಿ ಹರೀಶ್ ಮಡ್ಕೈಕರ್ ಅವರು ಹೇಳಿದ್ದಾರೆ. ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ಈ ಘಟನೆಯನ್ನು ಗಂಭೀರವಾಗಿ ಖಂಡಿಸಿದ್ದಾರೆ. ಆರೋಪಿಗಳನ್ನು ಕೂಡಲೇ ಬಂಧಿಸುವAತೆ ಅವರು ಪೊಲೀಸರಿಗೆ ಸೂಚಿಸಿದ್ದು, ಸಿಸಿ ಕ್ಯಾಮರಾ ದೃಶ್ಯಾವಳಿ ಆಧಾರದಲ್ಲಿ ಆರೋಪಿಗಳ ಹುಡುಕಾಟ ನಡೆದಿದೆ.