ಯಲ್ಲಾಪುರದ ಹೆಬ್ಬಾರ್ ನಗರದಲ್ಲಿ ಬಡವರಿಗಾಗಿ ಮನೆ ನಿರ್ಮಿಸಲಾಗಿದ್ದು, ಒಟ್ಟು 342 ಕುಟುಂಬಗಳಿಗೆ ಸೋಮವಾರ ಶಾಸಕ ಶಿವರಾಮ ಹೆಬ್ಬಾರ್ ಅವರು ಮನೆ ಹಸ್ತಾಂತರಿಸಿದ್ದಾರೆ. ಸ್ವಂತದೊoದು ಸೂರು ಹೊಂದಿರಬೇಕು ಎಂದು ಕನಸು ಕಂಡ ಅನೇಕರಿಗೆ ಅವರವರ ಅರ್ಹತೆ ಆಧಾರದಲ್ಲಿ ಈ ದಿನ ಮನೆ ಸಿಕ್ಕಿದೆ.
ವಸತಿರಹಿತ ಬಡ ಕುಟುಂಬಗಳಿಗೆ ಶಾಶ್ವತ ನೆಲೆ ಕಲ್ಪಿಸುವ ಮಹತ್ವಾಕಾಂಕ್ಷೆಯಿoದ ಹೆಬ್ಬಾರ ನಗರದಲ್ಲಿ ಜಿ+2 ಮಾದರಿಯ ಮನೆ ನಿರ್ಮಾಣ ಕಾರ್ಯ ನಡೆದಿತ್ತು. ಮೊದಲ ಹಂತದಲ್ಲಿ ಕಾಮಗಾರಿ ಪೂರ್ಣಗೊಂಡಿದ್ದು, ಮನೆಗಾಗಿ ಕಾದ ಜನ 1 ಲಕ್ಷ ರೂ ಹಣಪಾವತಿಸಿ ಅದರ ಫಲಾನುಭವಿ ಆಗಲು ಕಾದಿದ್ದರು. ಆಧುನಿಕ ಸೌಲಭ್ಯಗಳನ್ನು ಕಲ್ಪಿಸಿದ ನಂತರ ಈ ದಿನ ಶಿವರಾಮ ಹೆಬ್ಬಾರ್ ಅವರು ಆ ಮನೆಗಳನ್ನು ಪಲಾನುಭವಿಗಳಿಗೆ ಹಸ್ತಾಂತರ ಮಾಡಿದರು.
`12 ಲಕ್ಷ ರೂ ಮೌಲ್ಯದ ಮನೆ 1 ಲಕ್ಷ ರೂಪಾಯಿಗೆ ಫಲಾನುಭವಿಗಳಿಗೆ ಸಿಗುತ್ತಿದೆ. ಹತ್ತು ವರ್ಷಗಳ ಪ್ರಯತ್ನಿಸಿದ ಪರಿಣಾಮ ಈ ಮನೆ ನಿರ್ಮಾಣವಾಗಿದೆ’ ಎಂದು ಶಿವರಾಮ ಹೆಬ್ಬಾರ್ ಅವರು ಹೇಳಿದರು. `ಪ್ರತಿಯೊಬ್ಬರಿಗೂ ಸುರಕ್ಷಿತ ಹಾಗೂ ಗೌರವಯುತ ವಸತಿ ಸೌಲಭ್ಯ ಒದಗಿಸುವುದು ತಮ್ಮ ಸಂಕಲ್ಪವಾಗಿದ್ದು, ಬಡವರ ಬದುಕಿನಲ್ಲಿ ನೆಮ್ಮದಿ ಮತ್ತು ಭದ್ರತೆಯನ್ನು ಮೂಡಿಸುವ ನಿಟ್ಟಿನಲ್ಲಿ ಈ ಯೋಜನೆ ಮಹತ್ವದ ಹೆಜ್ಜೆಯಾಗಿದೆ’ ಎಂದರು.