ಧಾರವಾಡ ಉಚ್ಛ ನ್ಯಾಯಾಲಯದ ಆದೇಶ ಪಾಲನೆ ಮಾಡದ ಕಂದಾಯ ಅಧಿಕಾರಿಗಳ ವಿರುದ್ಧ ನ್ಯಾಯವಾದಿಯೊಬ್ಬರು ನ್ಯಾಯಾಂಗ ನಿಂದನೆ ಅರ್ಜಿ ದಾಖಲಿಸಿದ್ದಾರೆ.
ಯಲ್ಲಾಪುರದಲ್ಲಿ ಹಿತ್ಲಕಾರಗದ್ದೆಯ ಕೃಷಿ ಭೂಮಿ ವಿಷಯವಾಗಿ ಯಲ್ಲಾಪುರ ಕಂದಾಯ ಅಧಿಕಾರಿಗಳು ಅನಗತ್ಯ ಗೊಂದಲ ಮಾಡಿಕೊಂಡಿದ್ದು, ಈ ವಿಷಯ ರಿಟ್ ಪಿಟಿಶನ್ ಮೂಲಕ ಧಾರವಾಡ ಹೈಕೋರ್ಟಿನ ಮೆಟ್ಟಿಲೇರಿತ್ತು. ಹೈಕೋರ್ಟ ಆದೇಶ ನೀಡಿದರೂ ಆ ವಿಷಯ ಬಗೆಹರಿಯದ ಕಾರಣ ವಕೀಲರು ನ್ಯಾಯಾಂಗ ನಿಂದನೆ ಅರ್ಜಿ ದಾಖಲಿಸಿದ್ದಾರೆ. ಹಿತ್ಲಕಾರಗದ್ದೆಯ ಕೃಷಿ ಭೂಮಿ ಮಾಲಕರು ತಮ್ಮ ಪಹಣಿಯಲ್ಲಿ ದಾಖಲಾಗಿದ್ದ ಷರತ್ತು ತೆಗೆಯುವಂತೆ ತಹಶೀಲ್ದಾರ್ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಅವರ ಕೃಷಿ ಭೂಮಿಯಲ್ಲಿ 15 ವರ್ಷ ಪರಾಧೀನ ಮಾಡಬಾರದು ಎಂಬ ಷರತ್ತು ಇದ್ದು, `ಈ ಷರತ್ತು ತೆಗೆಯಲು ಸರ್ಕಾರದ ಅನುಮತಿ ಅಗತ್ಯ. ಸದರಿ ಜಮೀನು ಪರಿಶಿಷ್ಟ ಜಾತಿ/ಪಂಗಡಗಳ ನಿರ್ದಿಷ್ಟ ಭೂಮಿ ಪರಬಾರೆ ತಡೆ ಕಾಯ್ದೆಗೆ ಒಳಪಡುತ್ತದೆ’ ಎಂದು ತಹಶೀಲ್ದಾರ್ ಕಚೇರಿಯಿಂದ ಹಿಂಬರಹ ಬಂದಿತ್ತು.
ಅದಾದ ನಂತರ ಈ ಪ್ರಕರಣವನ್ನು ಶಿರಸಿಯ ನ್ಯಾಯವಾದಿ ಶ್ರೀನಿವಾಸ ಕೃಷ್ಣ ನಾಯ್ಕ ಅವರು ಧಾರವಾಡದ ಉಚ್ಚ ನ್ಯಾಯಾಲಯದಲ್ಲಿ ರಿಟ್ ಪಿಟಿಶನ್ ದಾಖಲಿಸಿದರು. ಪ್ರಕರಣ ಪರಿಶೀಲಿಸಿದ ನ್ಯಾಯಾಲಯ `ಈ ಭೂಮಿಯ ಮೂಲ ಮಂಜೂರಿದಾರರು ಪರಿಶಿಷ್ಟ ವರ್ಗಕ್ಕೆ ಸೇರಿದರೂ ಸಹ ಭೂಮಿಯನ್ನು ಸಾಗುವಳಿ ಆಧಾರದ ಮೇಲೆ ನೀಡಿದ್ದರಿಂದ ಅದು ಪಿಟಿಸಿಎಲ್ ಕಾಯ್ದೆ ಒಳಪಡುವುದಿಲ್ಲ’ ಎಂದು ಹೇಳಿತ್ತು. ಜೊತೆಗೆ `ಈ ಅರ್ಜಿ ಪುನರ್ ಪರಿಶೀಲನೆ ಮಾಡಿ, 3 ತಿಂಗಳ ಒಳಗಾಗಿ ಕ್ರಮವಹಿಸಬೇಕು’ ಎಂದು ಸೂಚಿಸಿತ್ತು. ಅದಾದ ನಂತರ ಉಚ್ಚ ನ್ಯಾಯಾಲಯದ ಆದೇಶವನ್ನು ಕಂದಾಯ ಅಧಿಕಾರಿಗಳು ಭಾಗಷಃ ಪಾಲನೆ ಮಾಡಿದ್ದರು. ಆದರೆ, ಮತ್ತೆ `ಈ ಭೂಮಿ ಪಿಟಿಸಿಎಲ್ ಕಾಯ್ದೆ ಅಡಿಗೆ ಬರುತ್ತದೆ’ ಎಂದು ಅರ್ಜಿದಾರರಿಗೆ ಹಿಂಬರಹ ನೀಡಿದ್ದರು. `ಇದರಿಂದ ನ್ಯಾಯಾಲಯದ ಆದೇಶ ಉಲ್ಲಂಘನೆ ಆಗಿ, ನ್ಯಾಯಾಂಗ ನಿಂದನೆ ಆಗಿದೆ’ ಎಂದು ದೂರಿ ನ್ಯಾಯವಾದಿ ಶ್ರೀನಿವಾಸ ಕೃಷ್ಣ ನಾಯ್ಕ ಅವರು ನ್ಯಾಯಾಂಗ ನಿಂದನೆ ಅರ್ಜಿ ದಾಖಲಿಸಿದರು. ಸದ್ಯ ಈ ಅರ್ಜಿ ವಿಚಾರಣೆ ನಡೆಯುತ್ತಿದೆ.
`1994ರಲ್ಲಿ ಪರಾಧೀನ ಮಾಡದಂತೆ 15 ವರ್ಷದ ಷರತ್ತು ವಿಧಿಸಲಾಗಿತ್ತು. 2009ರ ಅವಧಿಯಲ್ಲಿ ಆ ಷರತ್ತು ಮುಗಿದಿದ್ದು, 2025ರಲ್ಲಿ ಷರತ್ತು ಕಡಿಮೆಗೊಳಿಸಿ ಎಂದು ಅರ್ಜಿದಾರರು ಮನವಿ ಮಾಡಿದ್ದರು. ಆದರೆ, ಅಧಿಕಾರಿಗಳ ನಿರ್ಲಕ್ಷದಿಂದ ಅರ್ಜಿದಾರರಿಗೆ ಸಮಸ್ಯೆ ಆಗಿದೆ. ಹೀಗಾಗಿ ಈ ಉಚ್ಚ ನ್ಯಾಯಾಲಯದವರೆಗೆ ಹೋಗುವುದು ಅನಿವಾರ್ಯವಾಯಿತು’ ಎಂದು ನ್ಯಾಯವಾದಿ ಶ್ರೀನಿವಾಸ ಕೃಷ್ಣ ನಾಯ್ಕ ಅವರು ವಿವರಿಸಿದರು.