ಉತ್ತರ ಕನ್ನಡ ಜಿಲ್ಲೆಯ ಪ್ರತಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಯುವ ಸಂಘ ರಚನೆಯಾಗಬೇಕಿದ್ದು, 10ರೂ ಪಾವತಿಸಿ ಸದಸ್ಯರಾದವರ ಸಂಘಕ್ಕೆ ಸರ್ಕಾರ ಪ್ರತಿ ವರ್ಷ 10 ಲಕ್ಷ ರೂ ನೆರವು ನೀಡಲಿದೆ. ನಗರ ವ್ಯಾಪ್ತಿಯಲ್ಲಿಯೂ ಸಹ ಈ ಸಂಘ ನೋಂದಣಿಗೆ ಅವಕಾಶವಿದೆ.
ಪ್ರತಿ ಗ್ರಾಮ ಪಂಚಾಯತ ಹಾಗೂ ನಗರ ವ್ಯಾಪ್ತಿಯಲ್ಲಿ ಯುವಪಡೆ ನಿರ್ಮಾಣಕ್ಕೆ ಸರ್ಕಾರ ಆಸಕ್ತಿವಹಿಸಿದ್ದು, ನೋಂದಾಯಿತ ಯುವ ಸಂಘಗಳ ಪ್ರತಿ ವರ್ಷ 10 ಲಕ್ಷ ರೂ ನೆರವು ನೀಡಲು ನಿರ್ಧರಿಸಿದೆ. ಗ್ರಾಮ ಒನ್ ಕೇಂದ್ರಗಳ ಮೂಲಕ ಸಂಘ ನೋಂದಣಿಗೆ ಅವಕಾಶ ನೀಡಲಾಗಿದೆ. ವಿಕಾಸಶೀಲ ಹಾಗೂ ಸೌಹಾರ್ದಶೀಲ ಕರ್ನಾಟಕ ನಿರ್ಮಾಣಕ್ಕಾಗಿ ಸರ್ಕಾರ ಮಹತ್ವದ ಯೋಜನೆಯನ್ನು ಜಾರಿಗೆ ತಂದಿದೆ. ಯುವಜನರಲ್ಲಿ ನಾಯಕತ್ವ ಗುಣ ಮತ್ತು ಆರೋಗ್ಯಕರ ಜೀವನಶೈಲಿ ಉತ್ತೇಜಿಸಲು ‘ಭಾರತ್ ಜೋಡೋ’ ಯುವ ಸಂಘಗಳ ಯುವ ಸಂಘಗಳ ಸ್ಥಾಪನೆಗಾಗಿ ಸದಸ್ಯತ್ವ ನೋಂದಣಿ ಅಭಿಯಾನ ಶುರು ಮಾಡುತ್ತಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿಯೂ ಪ್ರತಿ ಗ್ರಾಮ ಪಂಚಾಯತಗೆ ಒಂದು ಹಾಗೂ ಪ್ರತಿ ನಗರ ಸ್ಥಳೀಯ ಸಂಸ್ಥೆಗೆ ಒಂದರoತೆ ಸಂಘಗಳ ನಿರ್ಮಾಣಕ್ಕಾಗಿ ಅರ್ಜಿ ಕರೆದಿದೆ.
16 ರಿಂದ 35 ವರ್ಷದೊಳಗಿನ ಜನರು ಸಂಘದ ಸದಸ್ಯರಾಗಲು ಅರ್ಹರು. ಸಂಘದ ನೋಂದಣಿಗೆ ರೂ 10 ಶುಲ್ಕ ನಿಗದಿಪಡಿಸಲಾಗಿದ್ದು, ಪ್ರತಿಯೊಬ್ಬ ವ್ಯಕ್ತಿಯು ಒಂದು ಸಂಘಕ್ಕೆ ಮಾತ್ರ ಸೇರಲು ಅವಕಾಶ ನೀಡಲಾಗಿದೆ. ಪ್ರತಿಯೊಂದು ಯುವ ಸಂಘದ ರಚನೆಗೆ ಕನಿಷ್ಠ 100 ಜನರ ಸದಸ್ಯತ್ವ ಕಡ್ಡಾಯವಾಗಿದ್ದು, 15 ಸದಸ್ಯರ ಕಾರ್ಯಕಾರಿ ಸಮಿತಿಯನ್ನು ಹೊಂದಿರಬೇಕು ಎಂಬ ನಿಯಮವಿದೆ. ಎಲ್ಲಾ ಸಮುದಾಯದ ಯುವ ಪ್ರತಿನಿಧಿಗಳು ಈ ಕಾರ್ಯಕಾರಿ ಸಮಿತಿಯಲ್ಲಿ ಇರಲಿದ್ದಾರೆ. ಈ ಮೂಲಕ ವಿವಿಧ ಜಾತಿ, ಧರ್ಮ, ವರ್ಗ, ಭಾಷೆ, ಜನಾಂಗ ಮತ್ತು ಸಮುದಾಯಗಳು ಒಗ್ಗಟ್ಟಾಗಿ ಸೌಹಾರ್ದಶೀಲ ಮತ್ತು ವಿಕಾಸಶೀಲ ಕರ್ನಾಟಕವನ್ನು ನಿರ್ಮಿಸುವುದು ಈ ಯೋಜನೆಯ ಉದ್ದೇಶವಾಗಿದೆ.
ಈ ಯೋಜನೆಯ ಅನುಷ್ಠಾನಕ್ಕಾಗಿ ಸರ್ಕಾರದಿಂದ ಬಂಡವಾಳ ಅನುದಾನ ಲಭಿಸಲಿದೆ. ಈ ಯುವ ಸಂಘಗಳು ಕ್ರೀಡೆ, ಫಿಟ್‌ನೆಸ್, ಕೆರೆ ಹಾಗೂ ಕಲ್ಯಾಣಿ ಸ್ವಚ್ಛತೆ, ಅರಣ್ಯ ಮತ್ತು ಪರಿಸರ ಸಂರಕ್ಷಣೆ, ಆರೋಗ್ಯ, ಸಂಸ್ಕೃತಿ, ಸಾಮಾಜಿಕ ಸಾಮರಸ್ಯ ಮತ್ತು ಯುವ ಸಬಲೀಕರಣಕ್ಕೆ ಸಂಬAಧಿಸಿದ ಹಲವು ಜಾಗೃತಿ ಅಭಿಯಾನಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲಿವೆ. ಆನ್ ಲೈನ್ ಮೂಲಕವೂ ಸಂಘ ನೋಂದಣಿ ಅವಕಾಶ ನೀಡಲಾಗಿದ್ದು https://bjys.karnataka.gov.in/ ಮೂಲಕ ನೋಂದಣಿ ಪ್ರಕ್ರಿಯೆ ಮಾಡಬಹುದಾಗಿದೆ. ಇಲ್ಲಿ ಗೊತ್ತಾಗದವರು ಸಮೀಪದ ಗ್ರಾಮ ಒನ್ ಕೇಂದ್ರಕ್ಕೆ ಹೋಗಿ ಸಂಘ ನೋಂದಣಿ ಮಾಡಿಸುವುದು ಉತ್ತಮ.