ಜೊಯಿಡಾ ಭಾಗದಲ್ಲಿ ಸುರಿದ ಮಳೆಗೆ ಕಾರವಾರ-ಜೊಯಿಡಾ ರಸ್ತೆ ಹದಗೆಟ್ಟಿದ್ದು, ದೇವುಳ್ಳಿ ಬಳಿ ರಸ್ತೆ ಕುಸಿತವಾಗಿದೆ. ಭಾನುವಾರ ಅಲ್ಲಿ ಬಸ್ಸು ಸಿಕ್ಕಿಬಿದ್ದಿದ್ದು, ಸೋಮವಾರ ಅದೇ ಪ್ರದೇಶದಲ್ಲಿ ಲಾರಿಯೊಂದು ಸಿಲುಕಿದೆ!
ಭಾನುವಾರ ಸುರಿದ ಭಾರೀ ಮಳೆಗೆ ಜೊಯಿಡಾ-ಕಾರವಾರ ರಸ್ತೆ ದೇವುಳ್ಳಿ ಬಳಿ ಕುಸಿತಕ್ಕೆ ಒಳಗಾಗಿತ್ತು. ಆ ಕುಸಿತ ಪ್ರದೇಶದಲ್ಲಿ ಕೆಸರು ತುಂಬಿದ್ದು, ಅಲ್ಲಿ ಸರ್ಕಾರಿ ಬಸ್ಸು ಸಿಕ್ಕಿ ಬಿದ್ದಿತ್ತು. ಅದಾದ ನಂತರ ನಡೆದ ರಕ್ಷಣಾ ಕಾರ್ಯಾಚರಣೆಯಲ್ಲಿ ಬಸ್ಸು ಹೊರತೆಗೆಯಲಾಗಿದ್ದು, ರಸ್ತೆ ಕುಸಿತದ ಕಾರಣ ಸಂಜೆ ಬಸ್ಸಿನ ಪ್ರಯಾಣಿಕರು ಸಮಸ್ಯೆ ಅನುಭವಿಸಿದ್ದರು. ಸೋಮವಾರ ತರಕಾರಿ ಸಾಗಿಸುವ ಈಚರ್ ಲಾರಿ ಅದೇ ಮಾರ್ಗದಲ್ಲಿ ಸಿಕ್ಕಿ ಬಿದ್ದಿತು. ಅದರಿಂದಲೂ ಇನ್ನಿತರ ವಾಹನ ಓಡಾಟಕ್ಕೆ ಸಮಸ್ಯೆಯಾಯಿತು.
ರಸ್ತೆಯ ಒಂದು ಭಾಗ ದುರ್ಬಲಗೊಂಡಿದ್ದರಿoದ ಈಚರ್ ಲಾರಿ ಚಕ್ರ ರಸ್ತೆ ಒಳಗೆ ಕುಸಿದಿದ್ದು, ಆ ಲಾರಿ ಮುಂದೆ ಸಾಗಲು ಸಾಧ್ಯವಾಗಲಿಲ್ಲ. ಹೀಗಾಗಿ ಕಾರವಾರ-ಜೊಯಿಡಾ ಮಾರ್ಗದಲ್ಲಿ ಸಂಚಾರ ಅಸ್ತವ್ಯಸ್ಥವಾಯಿತು. ಈ ವೇಳೆ ಅಲ್ಲಿಗೆ ಬಂದ ಪೊಲೀಸರು ಸಂಚಾರ ದಟ್ಟಣೆ ಆಗುವುದನ್ನು ತಪ್ಪಿಸಿದರು. ಅದಾದ ನಂತರ ಜೆಸಿಬಿ ತರಿಸಿ ಲಾರಿಯನ್ನು ಹೊರಗೆ ಎಳೆಯಲಾಯಿತು.