ಕೋಳಿಗಳನ್ನು ಕಾದಾಟಕ್ಕೆ ಬಿಟ್ಟು ಅವುಗಳ ಮೇಲೆ ಬಾಜಿ ಕಟ್ಟಿದ್ದ ಮೂವರನ್ನು ಹೊನ್ನಾವರ ಪಿಸೈ ಮಹಾ0ತೇಶ ವಾಲ್ಮೀಕಿ ಅವರು ಹಿಡಿದಿದ್ದಾರೆ. ಓಡಿ ಪರಾರಿಯಾದ ಕುಮಟಾದ ಈಶ್ವರ ಉಪ್ಪಾರ್ ಅವರನ್ನು ಪೊಲೀಸರು ಹುಡುಕುತ್ತಿದ್ದಾರೆ.
ಹೊನ್ನಾವರದ ಕರ್ಕಿ ರೈಲ್ವೆ ನಿಲ್ದಾಣದ ಸಮೀಪದ ಅರಣ್ಯ ಪ್ರದೇಶದ ಬಳಿ ಅಗಸ್ಟ 30ರಂದು ಕೋಳಿಗಳ ಕಾದಾಟ ನಡೆದಿತ್ತು. ಆ ದಿನ ಸಂಜೆ 5 ಗಂಟೆಗೆ ಹೊನ್ನಾವರ ಹಳದಿಪುರ ಅಗ್ರಹಾರದ ಕೂಲಿ ಕಾರ್ಮಿಕ ಮಂಜುನಾಥ ತಿಮ್ಮಪ್ಪ ಗೌಡ (40) ಅವರು ಈ ಆಟವನ್ನು ಆಯೋಜಿಸಿದ್ದರು. ಅಗ್ರಹಾರ ಹಬ್ಬುಗದ್ದೆಯ ಶಿವಾನಂದ (ಶ್ರೀನಿವಾಸ) ಮಾಸ್ತಿ ಮುಕ್ರಿ (31) ಹಾಗೂ ಕುಮಟಾ ಹಳಕಾರದ ಅನಂತ ವೆಂಕಟರಮಣ ಪಟಗಾರ (32) ಅವರ ಜೊತೆ ಕುಮಟಾದ ಈಶ್ವರ ಉಪ್ಪಾರ್ ಅವರು ಅಲ್ಲಿಗೆ ಆಗಮಿಸಿ ಕೋಳಿ ಕಾಳಗಕ್ಕೆ ಹಣ ಹೂಡಿಕೆ ಮಾಡಿದ್ದರು.
ಕಾನೂನುಬಾಹಿರ ಕ್ರೀಡೆಯಾದ ಕೋಳಿ ಅಂಕ ನಡೆದ ಬಗ್ಗೆ ಅಲ್ಲಿನ ಒಬ್ಬರು ಪೊಲೀಸರಿಗೆ ಫೋನ್ ಮಾಡಿದರು. ಈ ಮಾಹಿತಿ ಆಧರಿಸಿ ಪಿಸೈ ಮಹಾ0ತೇಶ ವಾಲ್ಮೀಕಿ ಅವರು ತಮ್ಮ ತಂಡದ ಜೊತೆ ಅಲ್ಲಿ ದಾಳಿ ನಡೆಸಿದರು. ಆಗ, ಮಂಜುನಾಥ ಗೌಡ, ಶ್ರೀನಿವಾಸ ಮುಕ್ರಿ ಹಾಗೂ ಅನಂತ ಪಟಗಾರ ಅವರು ಸಿಕ್ಕಿಬಿದ್ದರು. ಪೊಲೀಸರನ್ನು ಕಂಡ ಈಶ್ವರ ಉಪ್ಪಾರ್ ಅವರು ಅದೇ ಕಾಡಿನಲ್ಲಿ ಓಡಿ ಪರಾರಿಯಾದರು. ಈಶ್ವರ ಉಪ್ಪಾರ್ ಅವರನ್ನು ಹಿಡಿಯಲು ಪೊಲೀಸರು ಪ್ರಯತ್ನಿಸಿದರೂ ಅವರು ಕೈಗೆ ಸಿಗಲಿಲ್ಲ.
ಅದಾಗಿಯೂ, ಈಶ್ವರ ಉಪ್ಪಾರ್ ಅವರನ್ನು ಅಲ್ಲಿಗೆ ಬಿಡದ ಪೊಲೀಸರು ಸಿಕ್ಕಿಬಿದ್ದ ಮೂವರ ಜೊತೆ ಅವರ ಹೆಸರನ್ನು ಸೇರಿಸಿ ಪ್ರಕರಣ ದಾಖಲಿಸಿದರು. ಈ ಪ್ರಕರಣದ ವಿಚಾರಣೆಗಾಗಿ ಈಶ್ವರ ಉಪ್ಪಾರ್ ಅವರ ಹುಡುಕಾಟ ಮುಂದುವರೆಸಿದರು. ಜೂಜಾಡುವುದು ಕಾನೂನುಬಾಹಿರವಾಗಿದ್ದು, ಅಂಥ ಆಟಗಳಿಗೆ ಅವಕಾಶವಿಲ್ಲ ಎಂದು ಎಚ್ಚರಿಕೆಯನ್ನು ನೀಡಿದರು.