ಶಿರಸಿಯ ಮಂಗಲಾ ನಾಯ್ಕ ಅವರು 50 ವರ್ಷ ಹಳೆ ಮನೆಗೆ 5 ಲಕ್ಷ ರೂ ಖರ್ಚು ಮಾಡಿ ಆರು ತಿಂಗಳ ಹಿಂದೆ ನವೀಕರಣ ಮಾಡಿಕೊಂಡಿದ್ದು, ಹೊಟ್ಟೆಕಿಚ್ಚಿನ ಕಿಡಿಗೆ ಆ ಇಡೀ ಮನೆ ಧ್ವಂಸವಾಗಿದೆ. ಮಂಗಲಾ ನಾಯ್ಕ ಅವರ ಪತಿ ಪ್ರಭಾಕರ ನಾಯ್ಕ ಅವರ ಸಹೋದರರಾದ ಜನಾರ್ಧನ ನಾಯ್ಕ ಹಾಗೂ ಉದಯ ನಾಯ್ಕ ಸೇರಿ ಜೆಸಿಬಿ ಬಳಸಿ ಮನೆಯನ್ನು ಕೆಡವಿದ್ದಾರೆ.
ಶಿರಸಿ ಕುಮಟಾ ರಸ್ತೆ ಮಾರ್ಗದ ವಿದ್ಯಾಧಿರಾಜ ಕಲಾಕ್ಷೇತ್ರದ ಸಮೀಪ ಮಂಗಲಾ ನಾಯ್ಕ ಹಾಗೂ ಅವರ ಪತಿ ಪ್ರಭಾಕರ ನಾಯ್ಕ ಅವರು ವಾಸವಾಗಿದ್ದರು. ಪತಿ ಮರಣದ ನಂತರ ಮಂಗಲಾ ನಾಯ್ಕ ಅವರಿಗೆ ಅವರ ಮಗ ಅಮೋಘ ನಾಯ್ಕ ಅವರೇ ಆಸರೆಯಾಗಿದ್ದರು. ಅನಾಧಿಕಾಲದಿಂದಲೂ ಬಂದ ಮನೆಯ ತೆರಿಗೆಯನ್ನು ಪ್ರಭಾಕರ ನಾಯ್ಕ ಅವರೇ ಪಾವತಿಸುತ್ತಿದ್ದು, ಹಳೆಯ ಮನೆಯಲ್ಲಿಯೇ ಅಮ್ಮ-ಮಗ ಜೀವಿಸುತ್ತಿದ್ದರು. ಆರು ತಿಂಗಳ ಹಿಂದೆ 5 ಲಕ್ಷ ರೂ ಖರ್ಚು ಮಾಡಿ ಅವರಿಬ್ಬರು ಮನೆಯ ನವೀಕರಣ ಕಾರ್ಯವನ್ನು ಮಾಡಿದ್ದರು. ಪ್ರಭಾಕರ ನಾಯ್ಕ ಹಾಗೂ ಅವರ ಸಹೋದರರಾದ ಜನಾರ್ಧನ ನಾಯ್ಕ ಮತ್ತು ಉದಯ ನಾಯ್ಕ ಅವರ ನಡುವೆ ವೈಮನಸ್ಸಿದ್ದು, ಅದೇ ವೈಮನಸ್ಸಿನ ಕಾರಣದಿಂದ ಮಂಗಲಾ ನಾಯ್ಕ ಅವರು ವಾಸವಾಗಿದ್ದ ಮನೆಯನ್ನು ಅವರಿಬ್ಬರು ಕೆಡವಿದ್ದಾರೆ. ಮನೆ ನವೀಕರಣಕ್ಕೆ ತಂದಿದ್ದ ಸಿಮೆಂಟ್ ಶೀಟ್, ನೀರಿನ ಟಾಕಿ ಸೇರಿ ಅನೇಕ ವಸ್ತುಗಳನ್ನು ಅವರಿಬ್ಬರು ಸೇರಿ ಧ್ವಂಸ ಮಾಡಿದ್ದಾರೆ.
ಪ್ರಭಾಕರ ನಾಯ್ಕ ಅವರ ನಿಧನದ ನಂತರ ಮಂಗಲಾ ನಾಯ್ಕ ಅವರು ಮಕ್ಕಳ ಕಲಿಕೆಗಾಗಿ ಹುಬ್ಬಳ್ಳಿಗೆ ಹೋಗಿದ್ದು, ಆಗಾಗ ಶಿರಸಿಗೆ ಬರುತ್ತಿದ್ದರು. ಹಳೆಯ ಮನೆಯಲ್ಲಿ ತಮಗೂ ಪಾಲು ಬೇಕು ಎಂದು ಕಾಡಿಸುತ್ತಿದ್ದ ಪ್ರಭಾಕರ ನಾಯ್ಕ ಅವರ ಸಹೋದರರು ಪಾಲು ಸಿಗದ ಸಿಟ್ಟಿನಲ್ಲಿ ಮನೆ ನಾಶ ಮಾಡಿದ್ದಾರೆ. ಮಂಗಲಾ ನಾಯ್ಕ ಅವರು ಹುಬ್ಬಳ್ಳಿಗೆ ಹೋದ ವಿಷಯ ಅರಿತು ಏಕಾಏಕಿ ಮನೆ ಮುರಿದಿದ್ದಾರೆ. `ಈ ಮನೆಯ ಕರ ಪಾವತಿ, ವಿದ್ಯುತ್ ಬಿಲ್ ನಾನು ಮಾಡಿದ್ದೇನೆ. ಮನೆಯೂ ತಮ್ಮ ಪತಿ ಪ್ರಭಾಕರ ನಾಯ್ಕ ಅವರ ಹೆಸರಿನಲ್ಲಿದೆ. ಪಾಲು ಸಿಗಲಿಲ್ಲ ಎಂಬ ಕಾರಣಕ್ಕೆ ಮನೆ ನಾಶ ಮಾಡಿ, ನಮಗೆ ಅನ್ಯಾಯ ಮಾಡಲಾಗಿದೆ’ ಎಂದು ಮಂಗಲಾ ನಾಯ್ಕ ಅವರು ಅಳಲು ತೋಡಿಕೊಂಡಿದ್ದಾರೆ.