ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದ ಲಾರಿ ಹಿಡಿದ ಅಧಿಕಾರಿಗಳಿಗೆ ರಾಘವೇಂದ್ರ ಭಟ್ಟ ಹಾಗೂ ರವೀಂದ್ರ ಭಟ್ಟ ಅವರ ಕಳ್ಳ ವ್ಯವಹಾರಗಳ ಬಗ್ಗೆ ಮಾಹಿತಿ ಸಿಕ್ಕಿದೆ. ಅಲ್ಲಿ-ಇಲ್ಲಿ ಬಾಳೆಕಾಯಿ ವ್ಯಾಪಾರ ಮಾಡಿಕೊಂಡಿದ್ದ ಅವರಿಬ್ಬರು ನೆರೆ ರಾಜ್ಯಗಳಿಗೂ ರಾಜಾರೋಷವಾಗಿ ಸರ್ಕಾರಿ ಅಕ್ಕಿ ಸಾಗಾಟ ಮಾಡುತ್ತಿರುವುದನ್ನು ನೋಡಿ ಅಧಿಕಾರಿಗಳೇ ದಂಗಾಗಿದ್ದಾರೆ.
ಅನ್ನಭಾಗ್ಯ ಯೋಜನೆ ಅಡಿ ಸರ್ಕಾರ ಬಡವರಿಗೆ ಪಡಿತರ ಅಕ್ಕಿ ವಿತರಿಸುತ್ತಿದೆ. ಆ ಅಕ್ಕಿ ವ್ಯಾಪಕ ಪ್ರಮಾಣದಲ್ಲಿ ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ. ಸರ್ಕಾರಿ ಅಕ್ಕಿ ಮಾರಾಟ-ಸಾಗಾಟ ಎರಡೂ ಅಪರಾಧ ಎಂದು ಜಾಗೃತಿ ಮೂಡಿಸಿದರೂ ಈ ದಂದೆಗೆ ಕಡಿವಾಣ ಬಿದ್ದಿಲ್ಲ. ಶಿರಸಿಯ ಆಹಾರ ಇಲಾಖೆ ಅಧಿಕಾರಿಗಳು ನಿರಂತರವಾಗಿ ದಾಳಿ ನಡೆಸುತ್ತಿದ್ದು, ಅಕ್ಕಿ ಕದಿಯುವವರ ವಿರುದ್ಧ ಸಮರ ಸಾರಿದ್ದಾರೆ. ಅದರಂತೆ, ಅಗಸ್ಟ 29ರಂದು ಶಿರಸಿ ತಹಶೀಲ್ದಾರ್ ಪುಟ್ಟರಾಜ ಗೌಡ ಅವರ ನೇತ್ರತ್ವದಲ್ಲಿ ನಡೆದ ದಾಳಿಯಲ್ಲಿ ಒಂದು ಲಾರಿಯ ತುಂಬ ಅಕ್ಕಿ ಸಿಕ್ಕಿದೆ. ಸಂಪೂರ್ಣ ಅಕ್ರಮವಾಗಿ ಸರ್ಕಾರಿ ಅಕ್ಕಿಯನ್ನು ಬೇರೆ ಬೇರೆ ರಾಜ್ಯಗಳಿಗೆ ಸಾಗಿಸುತ್ತಿದ್ದ ಸಂಗತಿಯೂ ಈ ವೇಳೆ ಬಹಿರಂಗವಾಗಿದೆ.
ಕAದಾಯ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಆಹಾರ ಇಲಾಖೆ ಸೇರಿ ನಡೆಸಿದ ಈ ಜಂಟಿ ಕಾರ್ಯಾಚರಣೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಿಂದ ಮಹಾರಾಷ್ಟ್ರದ ಕೊಲ್ಲಾಪುರದತ್ತ ಅಕ್ರಮವಾಗಿ ಸಾಗಿಸುತ್ತಿದ್ದ ಪಡಿತರ ಅಕ್ಕಿ ಸಿಕ್ಕಿ ಬಿದ್ದಿದೆ. ಅಶೋಕ ಲೈಲಾಂಡ್ ಲಾರಿಯಲ್ಲಿ 476 ಚೀಲ ಅಕ್ಕಿ ಸಾಗಿಸುತ್ತಿದ್ದವರನ್ನು ಅಧಿಕಾರಿಗಳು ವಶಕ್ಕೆಪಡೆದು ವಿಚಾರಣೆ ನಡೆಸಿದ್ದಾರೆ. ಅಧಿಕಾರಿಗಳನ್ನು ಕಂಡ ಲಾರಿ ಚಾಲಕ ಅಕ್ಕಿ ಮೂಟೆಗಳಿದ್ದ ಲಾರಿಸಹಿತ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದರೂ ಅದಕ್ಕೆ ಪೊಲೀಸರು ಅವಕಾಶ ಕೊಟ್ಟಿಲ್ಲ. ಅಕ್ಕಿ ಸಾಗಾಟದ ಲಾರಿಯ ಜೊತೆಗೆ ಕಾರೊಂದು ಸಂಚರಿಸುತ್ತಿರುವುದನ್ನು ಅನೇಕರು ಗಮನಿಸಿದ್ದಾರೆ. ಅಧಿಕಾರಿ ಅಥವಾ ತಪಾಸಣೆ ವೇಳೆ ದಿಕ್ಕು ತಪ್ಪಿಸುವುದಕ್ಕಾಗಿಯೇ ಆ ಕಾರು ಲಾರಿ ಜೊತೆಗೆ ಸಂಚರಿಸುತ್ತಿದ್ದ ಅನುಮಾನಗಳುವ್ಯಕ್ತವಾಗಿದೆ.
ತಹಶೀಲ್ದಾರ್ ಪಟ್ಟರಾಜ ಗೌಡ ಹಾಗೂ ಶಿರಸಿ ಟೌನ್ ಠಾಣೆಯ ಪಿಎಸ್‌ಐ ನರಸಿಂಹಲು ಅವರ ನೇತೃತ್ವದಲ್ಲಿ ನೀಲೇಕಣಿ ಭೀಮನಗುಡ್ಡ ಕ್ರಾಸ್ ಬಳಿ ಅಧಿಕಾರಿಗಳು ಲಾರಿಯನ್ನು ಜಪ್ತು ಮಾಡಿದ್ದು, ವಿಚಾರಣೆ ವೇಳೆ ಸಿದ್ದಾಪುರ ಹಾಳಕಟ್ಟಾ ಬಳಿಯ ರಾಘವೇಂದ್ರ ಭಟ್ಟ ಹಾಗೂ ರವೀಂದ್ರ ಭಟ್ಟ ಸೇರಿ ಈ ಅಕ್ಕಿ ವ್ಯಾಪಾರ ನಡೆಸುತ್ತಿರುವುದು ಹೊರಬಿದ್ದಿದೆ. ಬೆಳಗಾವಿ ಹುಕ್ಕೇರಿಯ ಲಾರಿ ಚಾಲಕ ದುರದುಂಡಿ ಅವರು ರಾಘವೇಂದ್ರ ಭಟ್ಟ ಹಾಗೂ ರವೀಂದ್ರ ಭಟ್ಟ ಅವರ ಜಾತಕ ಬಿಚ್ಚಿಟ್ಟಿದ್ದು, ಅವರ ಜೊತೆ ಶಿರಸಿಯ ನಿಸಾರ ಅಹ್ಮದ್ ಸಯ್ಯದ್ ಅಹ್ಮದ್ ಹಾಗೂ ಬೆಳಗಾವಿ ಹುಕ್ಕೇರಿಯ ಸಾಗರ್ ಶಿವಾನಂದ ಹಾದಿಮನಿ ಸಹ ಕಳ್ಳ ಅಕ್ಕಿ ಸಾಗಾಟದಲ್ಲಿನ ಪ್ರಮುಖ ಆರೋಪಿಗಳಾಗಿದ್ದಾರೆ.
ಸಣ್ಣ ಪ್ರಮಾಣದಲ್ಲಿ ಬಾಳೆಕಾಯಿ ಮಾರಾಟ ಮಾಡಿಕೊಂಡಿದ್ದ ರಾಘವೇಂದ್ರ ಭಟ್ಟ ಹಾಗೂ ರವೀಂದ್ರ ಭಟ್ಟ ಅವರು ದೊಡ್ಡದಾಗಿ ದುಡ್ಡು ಮಾಡಬೇಕು ಎಂದು ಅಡ್ಡದಾರಿ ಹಿಡಿದಿದ್ದಾರೆ. ಅದಕ್ಕಾಗಿ ಶಿರಸಿಯ ನಿಸಾರ ಅಹ್ಮದ್ ಸಯ್ಯದ್ ಅಹ್ಮದ್ ಹಾಗೂ ಬೆಳಗಾವಿ ಹುಕ್ಕೇರಿಯ ಸಾಗರ್ ಶಿವಾನಂದ ಹಾದಿಮನಿ ಅವರ ಜೊತೆ ಮಾತುಕಥೆ ನಡೆಸಿ, ಚಾಲಕ ದುರದುಂಡಿ ಅವರ ನೆರವಿನಿಂದ ಸರ್ಕಾರಿ ಅಕ್ಕಿ ಕದ್ದು ಸಾಗಿಸುವ ಸಾಹಸ ಮಾಡಿದ್ದಾರೆ. ಲಾರಿ ಪ್ರಮಾಣದಲ್ಲಿ ಅಕ್ಕಿ ಸಾಗಾಟದ ವೇಳೆ ಅವರು ಸಿಕ್ಕಿ ಬಿದ್ದಿದ್ದು, ಆ ಲಾರಿಯನ್ನು ಅಧಿಕಾರಿಗಳು ವಶಕ್ಕೆಪಡೆದಿದ್ದಾರೆ. ಜೊತೆಗೆ ಹುಕ್ಕೇರಿಯ ಲಾರಿ ಚಾಲಕ ದುರದುಂಡಿ ಅವರ ಜೊತೆ ರಾಘವೇಂದ್ರ ಭಟ್ಟ, ರವೀಂದ್ರ ಭಟ್ಟ, ನಿಸಾರ ಅಹ್ಮದ್ ಸಯ್ಯದ್ ಅಹ್ಮದ್ ಹಾಗೂ ಸಾಗರ್ ಶಿವಾನಂದ ಹಾದಿಮನಿ ಅವರ ಹೆಸರನ್ನು ಸೇರಿಸಿ ಕೇಸು ಹಾಕಿದ್ದಾರೆ. ಒಟ್ಟು 8,56,460ರೂ ಮೌಲ್ಯದ ಅಕ್ಕಿಯ ಜೊತೆ ಅವರೆಲ್ಲರೂ ಸಿಕ್ಕಿಬಿದ್ದಿದ್ದಾರೆ.