ಕಳೆದ 25 ವರ್ಷಗಳಿಂದ ಲಾಭದಲ್ಲಿಯೇ ಮುನ್ನಡೆಯುತ್ತಿರುವ ಶಿರಸಿ ಸಿಪಿ ಬಜಾರಿನಲ್ಲಿರುವ ಶ್ರೀ ಭೂತೇಶ್ವರ ಪತ್ತಿನ ಸಹಕಾರಿ ಸಂಘವೂ ಈ ಬಾರಿ 67ಲಕ್ಷ ರೂಪಾಯಿಗೂ ಅಧಿಕ ಲಾಭಗಳಿಸಿದೆ. `ಕಡಿಮೆ ಬಡ್ಡಿ ದರದಲ್ಲಿ ಹೆಚ್ಚಿನ ಜನರಿಗೆ ಸಾಲ ವಿತರಿಸಿರುವುದೇ ಈ ಯಶಸ್ಸಿಗೆ ಕಾರಣ’ ಎಂದು ಸೊಸೈಟಿ ಅಧ್ಯಕ್ಷ ಶ್ರೀಧರ ಮೊಗೇರ್ ಅವರು ಹೇಳಿದ್ದಾರೆ.
ಬುಧವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು `ಪ್ರಸ್ತುತ ಸಂಘದಲ್ಲಿ ಶೇ 9ರ ಬಡ್ಡಿ ದರದಲ್ಲಿ ಬಂಗಾರದ ಅಡಮಾನ ಸಾಲ, ಶೇ 11ರ ದರದಲ್ಲಿ ವಾಹನ ಸಾಲ ಹಾಗೂ ಹೊಸದಾಗಿ ಶೇ 12ರ ಬಡ್ಡಿ ದರದಲ್ಲಿ ಅಡಮಾನ ಸಾಲ ನೀಡಲಾಗುತ್ತಿದೆ. 2025-26ನೇ ಹಣಕಾಸು ಸಾಲಿನಲ್ಲಿ 67,13,342.40ರೂ ಲಾಭಗಳಿಸಿದೆ. ಸಂಸ್ಥೆಯು ಅ ವರ್ಗದ ಆಡಿಟ್ ಶ್ರೇಣಿಯನ್ನು ಪಡೆದುಕೊಂಡಿದ್ದು, ಸದಸ್ಯರಿಗೆ ಅನೇಕ ಅನುಕೂಲಕರ ಯೋಜನೆಯನ್ನು ರೂಪಿಸಿದೆ’ ಎಂದು ವಿವರಿಸಿದರು. ಸೊಸೈಟಿಯಲ್ಲಿ ಒಟ್ಟು 1,34,76,000ರೂ ಶೇರು ಬಂಡವಳವಿದೆ. ಠೇವಣಿ 13.71 ಕೋಟಿ ರೂ ಹಾಗೂ ಕಾಯ್ದಿರಿಸಿದ ನಿಧಿ 177.62 ಲಕ್ಷ ರೂಪಾಯಿಗೆ ತಲುಪಿದೆ’ ಎಂದು ವಿವರಿಸಿದರು 12.04 ಕೋಟಿ ಸಾಲ ವಿತರಿಸಲಾಗಿದ್ದು, ಶೇ 97.67ನಷ್ಟು ವಸೂಲಾತಿ ದಾಖಲಾಗಿದೆ’ ಎಂದು ತಿಳಿಸಿದರು.
`ರಜತ ಮಹೋತ್ಸವದ ಅಂಗವಾಗಿ ಸೆಪ್ಟೆಂಬರ್ 19ರಂದು ವಿಶೇಷ ಸಭೆ ನಡೆಯಲಿದ್ದು, ಸಂಘದ ಸ್ಥಾಪಕ ವಸಂತ ಶೆಟ್ಟಿ ಅವರ ಸ್ಮರಣಾರ್ಥ ವಿಶೇಷ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿದೆ. ಸಹಕಾರಿ ಕ್ಷೇತ್ರದಲ್ಲಿ ಸಾಧನೆಗೆ ಯಲ್ಲಾಪುರ ಸಂಕಲ್ಪದ ಪ್ರಮೋದ ಹೆಗಡೆ ಹಾಗೂ ಸಾಮಾಜಿಕ & ನ್ಯಾಯಾಂಗ ಕ್ಷೇತ್ರದ ಅತ್ಯುತ್ತಮ ಸೇವೆಗೆ ಹಿರಿಯ ನ್ಯಾಯವಾದಿ ಅರುಣಾಚಲ ಪಿ. ಹೆಗಡೆ ಜಾನಮನೆ ಅವರನ್ನು ಗೌರವಿಸಲಾಗುತ್ತದೆ. ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುತ್ತದೆ’ ಎಂದವರು ಹೇಳಿದರು. ಈ ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾದ್ಯಕ್ಷರಾದ ಭಾಸ್ಕರ ಶೆಟ್ಟಿ, ನಿರ್ದೇಶಕರುಗಳಾದ ಕೇಶವ ಶೆಟ್ಟಿ, ಅಮಿತ್ ಹೆಗಡೆ,ಪೀಟರ್ ಫರ್ನಾಂಡೀಸ್, ತುಕರಾಮ ನೇತ್ರಕರ್, ಸಂಘದ ಮುಖ್ಯ ಕಾರ್ಯನಿರ್ವಾಹಕರಾದ ವಿನಾಯಕ ಶೆಟ್ಟಿ, ಆಂತರಿಕ ಸಲಹೆಗಾರ ಪ್ರಕಾಶ ಮದ್ಗುಣಿ ಇದ್ದರು.