ಉತ್ತರ ಕನ್ನಡ ಜಿಲ್ಲೆಯಲ್ಲಿ ಪಡಿತರ ಚೀಟಿ ಮೂಲಕ ಅಕ್ಕಿಪಡೆಯುವವರಿಗೆ ಆಹಾರ ಇಲಾಖೆ ಮಹತ್ವದ ಸೂಚನೆ ನೀಡಿದೆ. ಅಕ್ಟೋಬರ್ 20ರೊಳಗೆ ಕಡ್ಡಾಯವಾಗಿ ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸುವುದು ಕಡ್ಡಾಯವಾಗಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಒಟ್ಟು 5,69,044 ಪಡಿತರ ಚೀಟಿ ಸದಸ್ಯರು ಐದು ವರ್ಷಗಳ ಹಿಂದೆ ಇ-ಕೆವೈಸಿ ಮಾಡಿಸಿಕೊಂಡಿದ್ದು, ಇದೀಗ ಅಂತಹ ಸದಸ್ಯರು ಮತ್ತೊಮ್ಮೆ ಇ-ಕೆವೈಸಿ ಮಾಡಿಸಿಕೊಳ್ಳಬೇಕಾಗಿದೆ. ಇ-ಕೆವೈಸಿ ಬಾಕಿ ಇರುವ ಸದಸ್ಯರ ಪಟ್ಟಿಯನ್ನು ಈಗಾಗಲೇ ಸಂಬoಧಪಟ್ಟ ನ್ಯಾಯಬೆಲೆ ಅಂಗಡಿಗಳಿಗೆ ನೀಡಲಾಗಿದೆ. ಹೀಗಾಗಿ ಪಡಿತರ ಚೀಟಿದಾರರು ತಮ್ಮ ಹೆಸರು ಇ-ಕೆವೈಸಿ ಬಾಕಿ ಇರುವ ಪಟ್ಟಿಯಲ್ಲಿ ಇದೆಯೇ? ಎಂಬುದನ್ನು ತಮ್ಮ ವ್ಯಾಪ್ತಿಯ ನ್ಯಾಯಬೆಲೆ ಅಂಗಡಿಯಲ್ಲಿ ಪರಿಶೀಲಿಸಿಕೊಳ್ಳಬೇಕು. ಹೆಸರು ಬಾಕಿ ಇದ್ದರೆ ತಡಮಾಡದೆ ಹತ್ತಿರದ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ ಇ-ಕೆವೈಸಿ ಪೂರ್ಣಗೊಳಿಸಿಕೊಳ್ಳುವಂತೆ ಇಲಾಖೆ ಮನವಿ ಮಾಡಿದೆ. ಇ-ಕೆವೈಸಿ ಮಾಡಿಸಿಕೊಳ್ಳದೆ ಬಾಕಿ ಉಳಿದರೆ, ಪಡಿತರ ಚೀಟಿಯ ಆಧಾರದ ಮೇಲೆ ಸರ್ಕಾರದಿಂದ ಪಡೆಯುತ್ತಿರುವ ವಿವಿಧ ಸೌಲಭ್ಯಗಳು ಮುಂದಿನ ದಿನಗಳಲ್ಲಿ ಸ್ಥಗಿತಗೊಳ್ಳುವ ಸಾಧ್ಯತೆ ಇದೆ.
ಪಡಿತರ ಅಕ್ಕಿಪಡೆಯದ ಚೀಟಿದಾರರು ಸಹ ಕೆವೈಸಿ ಮಾಡಿಸುವುದು ಉತ್ತಮ. ಇನ್ನೂ ಈ ಪ್ರಕ್ರಿಯೆ ಸಂಪೂರ್ಣ ಉಚಿತವಾಗಿದೆ. ಅದಾಗಿಯೂ, ನ್ಯಾಯಬೆಲೆ ಅಂಗಡಿಗಳಲ್ಲಿ ಇ-ಕೆವೈಸಿಗಾಗಿ ಹಣ ಪಡೆಯುತ್ತಿದ್ದರೆ ಆಹಾರ ಇಲಾಖೆಯ ಗ್ರಾಹಕರ ಸಹಾಯವಾಣಿ 1967ಕ್ಕೆ ಕರೆ ಮಾಡಿ ದೂರು ಸಲ್ಲಿಸಬಹುದು. ಅಥವಾ ಸಂಬoಧಪಟ್ಟ ತಹಶೀಲ್ದಾರರ ಕಚೇರಿಯ ಆಹಾರ ಶಿರಸ್ತೇದಾರರು ಹಾಗೂ ಆಹಾರ ನಿರೀಕ್ಷಕರಿಗೆ ದೂರು ನೀಡಬಹುದಾಗಿದೆ.