ಉತ್ತರ ಕನ್ನಡ ಜಿಲ್ಲೆಯ 14 ಸಹಕಾರಿ ಸಂಘಗಳು ಸರ್ಕಾರದ ದಾರಿ ತಪ್ಪಿಸಿವೆ. ಆ ಸಂಘಗಳ ಕಚೇರಿಯೇ ಇಲ್ಲದಿರುವುದು ಹಾಗೂ ಲೆಕ್ಕ ಪರಿಶೋಧನೆ ಸಹ ನಡೆದಿರುವುದು ಸಹಕಾರಿ ಇಲಾಖೆ ಗಮನಕ್ಕೆ ಬಂದಿದೆ. ಈ ಹಿನ್ನಲೆ ಆ ಎಲ್ಲಾ ಸಹಕಾರಿ ಸಂಘಗಳ ನೋಂದಣಿ ರದ್ಧತಿಗೆ ಸಹಕಾರಿ ಇಲಾಖೆ ಆಸಕ್ತಿವಹಿಸಿದೆ.
ಕಾರವಾರ, ಜೊಯಿಡಾ, ಹಳಿಯಾಳ, ದಾಂಡೇಲಿಯಲ್ಲಿ ಇಂಥ ಸಹಕಾರಿ ಸಂಘಗಳು ಪತ್ತೆಯಾಗಿವೆ. ಕೆನರಾ ವಿವಿದೋದ್ದೇಶ ಸಹಕಾರಿ ಸಂಘ ನಿಯಮಿತ, ಶ್ರೀ ವಿಜಯಲಕ್ಷ್ಮೀ ಮಹಿಳಾ ವಿವಿದ್ದೋದ್ದೇಶ ಸಹಕಾರಿ ಸಂಘ ನಿಯಮಿತ, ಸುವರ್ಣಕಾರರ ಕೈಗಾರಿಕಾ ಸಹಕಾರ ಸಂಘ ನಿಯಮಿತ ಹಾಗೂ ಕಾರವಾರ ಮಹಿಳಾ ಔದ್ಯೋಗಿಕ ಸಹಕಾರಿ ಸಂಘ ನಿಯಮಿತದ ಕಚೇರಿ ಎಲ್ಲಿದೆ? ಎಂದು ಅಧಿಕಾರಿಗಳಿಗೆ ಗೊತ್ತಾಗುತ್ತಿಲ್ಲ. ದೇವಭಾಗ-ಕಣಸಗಿರಿ ಮೀನುಗಾರರ ಮಹಿಳಾ ಸಹಕಾರ ಸಂಘ ನಿಯಮಿತ, ನವಸಾಕ್ಷರ ಮಹಿಳಾ ವಿವಿದೋದ್ದೇಶ ಸಹಕಾರ ಸಂಘ ನಿಯಮಿತ ದೇವಭಾಗ, ಕೆರವಡಿಯ ಶ್ರೀ ಸಾತೇರಿ ಮಲ್ಟಿರ‍್ಪಸ್ ಕೋ ಆಪ್ರೇಟಿವ್ ಸೊಸೈಟಿ ನಿಯಮಿತ, ಚಿತ್ತಾಕುಲಾದ ಬಿಣಗಾ ಮೀನುಗಾರರ ಸಹಕಾರ ಸಂಘ ನಿಯಮಿತ, ಕಾರವಾರದ ಗೌರ್ನಮೆಂಟ್ ನೌಕರರ ಶ್ರೀ ಸಜ್ಜೆಶ್ವÀರ ಹೌಸಿಂಗ್ ಕೋ ಆಪ್ ಸೊಸೈಟಿ ನಿಯಮಿತ, ಜೋಯಿಡಾದ ಮಾವಳಿಂಗ ಗಂಗಾ ಕಲ್ಯಾಣ ಯೋಜನಾ ಫಲಾನುಭವಿಗಳ ಸಹಕಾರ ಸಂಘ ನಿಯಮಿತ, ಆನ್ಮಿ ಕುಣಬಿ ವಿವಿದೋದ್ದೇಶಗಳ ಸಹಕಾರ ಸಂಘ ನಿಯಮಿತ, ಹಳಿಯಾಳ ತಾಲೂಕಿನ ಸಾಂಬ್ರಾಣಿ ಅರಣ್ಯ ನಿವಾಸಿಗಳ ಅರಣ್ಯ ಉತ್ಪತ್ತಿ ಶೇಖರಣೆ ಗುತ್ತಿಗೆ ಮಾರಾಟ ಸಹಕಾರ ಸಂಘ ನಿಯಮಿತದ ಪದಾಧಿಕಾರಿಗಳು ಯಾರು? ಎಂದು ಅರಿವಾಗಿಲ್ಲ. ದಾಂಡೇಲಿಯ ಗೋಪಾಲ ಡೇರಿ ಆಂಡ್ ಮಲ್ಪಿಪರ್ಪಸ್ ಕೋ ಆಪ್ ಸೊಸೈಟಿ ನಿಯಮಿತ, ಬಂಗೂರನಗರ ಸಹಕಾರ ಸಂಘಗಳು ತಮ್ಮ ನೋಂದಾಯಿತ ಸ್ಥಳಗಳಲ್ಲಿ ಕಾರ್ಯನಿರ್ವಹಿಸುತ್ತಿಲ್ಲ. ಜೊತೆಗೆ ಈ ಎಲ್ಲಾ ಸಂಘಗಳ ಆಡಳಿತ ಮಂಡಳಿ ಸದಸ್ಯರು ಹಾಗೂ ಕಾರ್ಯದರ್ಶಿ ಯಾರು? ಎನ್ನುವ ಬಗ್ಗೆ ಮಾಹಿತಿ ಸಿಕ್ಕಿಲ್ಲ.
ಹಲವು ವರ್ಷಗಳಿಂದ ಸದರಿ ಸಂಘಗಳ ವ್ಯವಹಾರಗಳ ಲೆಕ್ಕ ಪರಿಶೋಧನೆಯೂ ಆಗಿಲ್ಲ. ಹೀಗಾಗಿ ಸಂಘಗಳ ಕೊಡತಕ್ಕ ಹಾಗೂ ಬರತಕ್ಕೆ ಬಾಬ್ತುಗಳ ಮಾಹಿತಿಯೂ ಯಾರಿಗೂ ಗೊತ್ತಿಲ್ಲ. ಈ ಎಲ್ಲಾ ಹಿನ್ನಲೆ ಈ ಸಹಕಾರ ಸಂಘಗಳಲ್ಲಿ ಯಾವುದೇ ವ್ಯಕ್ತಿಗಳಿಗೆ ಅಥವಾ ವ್ಯಕ್ತಿಗಳಿಂದ ಕೊಡತಕ್ಕ ಅಥವಾ ಬರತಕ್ಕ ಬಾಬ್ತುಗಳೆನಾದರೂ ಇದ್ದಲ್ಲಿ ಸೂಕ್ತ ದಾಖಲೆಗಳೊಂದಿಗೆ ಮಾಹಿತಿ ಕೊಡುವಂತೆ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿ ಪ್ರಕಟಣೆ ಹೊರಡಿಸಿದೆ. 7 ದಿನದ ಒಳಗೆ ಮಾಹಿತಿ ನೀಡದೇ ಇದ್ದರೆ ಯಾವುದೇ ಆಕ್ಷೇಪಣೆ ಇಲ್ಲ ಎಂದು ಭಾವಿಸಿ ಸಂಘದ ನೋಂದಣಿ ರದ್ಧು ಮಾಡುವುದಾಗಿ ತಿಳಿಸಿದೆ.