ಕಾರವಾರ-ಗೋವಾ ಭಾಗದ ಅನೇಕ ರೋಗಿಗಳು ಚಿಕ್ಕಬಳ್ಳಾಪುರ ಸಮೀಪದ ಮುದ್ದೇನಹಳ್ಳಿಯ ಆಸ್ಪತ್ರೆಗೆ ಭೇಟಿ ನೀಡುತ್ತಿದ್ದಾರೆ. ಅಲ್ಲಿನ ಶ್ರೀ ಮಧುಸೂದನ್ ಸಾಯಿ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ & ರಿಸರ್ಚ್ ಸೆಂಟರ್ ಉಚಿತ ವೈದ್ಯಕೀಯ ಸೇವೆ ನೀಡುತ್ತಿದೆ.
ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ಅವರು ಈ ಆಸ್ಪತ್ರೆಗೆ ಭೇಟಿ ನೀಡಿದ್ದು, ಅಲ್ಲಿನ ಸೇವಾ ಮನೋಭಾವನೆಯ ಬಗ್ಗೆ ಮಾಧ್ಯಮಕ್ಕೆ ವಿವರಿಸಿದ್ದಾರೆ. `ವೈದ್ಯಕೀಯ ಚಿಕಿತ್ಸೆ ದುಬಾರಿಯಾಗುತ್ತಿರುವ ಸನ್ನಿವೇಶದಲ್ಲಿ ಇಂಥಹ ಆಸ್ಪತ್ರೆ ಅಪರೂಪವಾಗಿದ್ದು, ತಜ್ಞ ವೈದ್ಯರ ಸೇವೆ ಎಲ್ಲರಿಗೂ ಸಿಗಲಿ’ ಎಂಬ ಉದ್ದೇಶಕ್ಕಾಗಿ ಅವರು ಆಸ್ಪತ್ರೆಯ ಪರಿಚಯ ಮಾಡಿದ್ದಾರೆ. `ವಿಶೇಷವಾಗಿ ಹೃದಯ ಸಂಬAಧಿ ಕಾಯಿಲೆಗಳಿಗೆ ಇಲ್ಲಿ ತಜ್ಞ ವೈದ್ಯರಿಂದ ತಪಾಸಣೆ ಮತ್ತು ಚಿಕಿತ್ಸೆ ನೀಡಲಾಗುತ್ತಿದ್ದು, ಅಗತ್ಯವಿಲ್ಲದ ಶಸ್ತ್ರಚಿಕಿತ್ಸೆ ಮಾಡದೆ ಸೂಕ್ತ ವೈದ್ಯಕೀಯ ಸಲಹೆ ನೀಡಲಾಗುತ್ತಿದೆ. ಈ ಆಸ್ಪತ್ರೆಯಲ್ಲಿ ಯಾವುದೇ ಕ್ಯಾಶ್ ಕೌಂಟರ್ ಇಲ್ಲದೆ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತಿದ್ದು, ರೋಗಿಗಳು ಹಾಗೂ ಅವರ ಜೊತೆ ಬರುವವರಿಗೂ ಆಹಾರ, ಪಾನೀಯ ಸೇರಿದಂತೆ ಅಗತ್ಯ ಸೇವೆಗಳನ್ನು ಉಚಿತವಾಗಿ ಒದಗಿಸಲಾಗುತ್ತಿದೆ’ ಎಂದವರು ಮಾಹಿತಿ ನೀಡಿದ್ದಾರೆ.
ಕಾರವಾರ ಮತ್ತು ಗೋವಾ ಭಾಗದಿಂದ ಹಲವು ರೋಗಿಗಳು ಅಲ್ಲಿಗೆ ಹೋಗುತ್ತಿದ್ದು,ಈ ಆಸ್ಪತ್ರೆಯಲ್ಲಿ ಮತ್ತೊಮ್ಮೆ ತಪಾಸಣೆ ಮಾಡಿಸಿಕೊಂಡು ಸೆಕೆಂಡ್ ಒಪಿನಿಯನ್ ಪಡೆಯುವಂತೆ ಮಾಧವ ನಾಯಕ ಅವರು ಸಲಹೆ ನೀಡಿದ್ದಾರೆ. `ಈಚೆಗೆ ಗೋವಾದ ದಿಗಂಬರ ಸಾಲಗಾವ್ಕರ್ ಅವರಿಗೆ ಗೋವಾ ಮೆಡಿಕಲ್ ಕಾಲೇಜಿನಲ್ಲಿ ಬೈಪಾಸ್ ಸರ್ಜರಿ ಅಗತ್ಯವಿದೆ ಎಂದು ತಿಳಿಸಲಾಗಿತ್ತು. ಸುಮಾರು 8 ಲಕ್ಷದವರೆಗೆ ವೆಚ್ಚವಾಗುವ ಸಾಧ್ಯತೆಯ ಹಿನ್ನೆಲೆಯಲ್ಲಿ ಆತಂಕಗೊAಡಿದ್ದ ಅವರು ಮಾಧವ ನಾಯಕ ಅವರ ಸಲಹೆಯ ಮೇರೆಗೆ ಮುದ್ದೇನಹಳ್ಳಿಯ ಸಾಯಿ ಆಸ್ಪತ್ರೆಗೆ ಭೇಟಿ ನೀಡಿದ್ದರು. ಮಾಧವ ನಾಯಕ ಅವರೇ ದಿಗಂಬರ ಸಾಲಗಾವ್ಕರ್ ಅವರನ್ನು ಕರೆದೊಯ್ದು, ಎಂಜಿಯೋಗ್ರಾಮ್ ವರದಿಗಳನ್ನು ಒಪ್ಪಿಸಿದ್ದರು. ಮತ್ತೊಮ್ಮೆ ತಪಾಸಣೆ ನಡೆಸಿದ ಕಾರ್ಡಿಯೋಲಜಿಸ್ಟ್ ಡಾ ಆನಂದ್ ಅಗರ್ವಾಲ್ ಅವರು ತಜ್ಞರ ತಂಡದ ಜೊತೆ ಚರ್ಚಿಸಿ `ಪ್ರಸ್ತುತ ಬೈಪಾಸ್ ಸರ್ಜರಿ ಅಗತ್ಯವಿಲ್ಲ’ ಎಂದು ತಿಳಿಸಿದರು. ಸದ್ಯ ರೋಗಿಗೆ ಔಷಧೋಪಚಾರ ಮುಂದುವರಿಸುವುದು, ನಿಯಮಿತ ವ್ಯಾಯಾಮ, ಸಮಯಕ್ಕೆ ಸರಿಯಾಗಿ ಆಹಾರ ಮತ್ತು ನಿದ್ರೆ ಮಾಡುವಂತೆ ವೈದ್ಯರು ಸಲಹೆ ನೀಡಿದ್ದಾರೆ.
ಇದೇ ರೀತಿ ಈ ಹಿಂದೆ ಮಾಧವ ನಾಯಕ ಅವರ ಸಂಬoಧಿಯೊಬ್ಬರಿಗೂ ಬೈಪಾಸ್ ಸರ್ಜರಿ ಅಗತ್ಯವೆಂದು ಬೇರೆ ವೈದ್ಯರು ಹೇಳಿದ್ದರು. ಇಲ್ಲಿ ತಪಾಸಣೆಯ ಬಳಿಕ ಔಷಧೋಪಚಾರದಿಂದಲೇ ಆರೋಗ್ಯ ಸುಧಾರಿಸಿಕೊಂಡಿದ್ದಾರೆ ಎಂದು ಅವರು ಮಾಹಿತಿ ನೀಡಿದರು.`ವೈದ್ಯಕೀಯ ಕ್ಷೇತ್ರ ಸೇವೆಯಾಗಿ ಉಳಿಯಬೇಕು. ಅಗತ್ಯವಿಲ್ಲದ ಶಸ್ತ್ರಚಿಕಿತ್ಸೆ ತಪ್ಪಿಸಲು ಸೆಕೆಂಡ್ ಒಪಿನಿಯನ್ ಬಹಳ ಮುಖ್ಯ. ಮುದ್ದೇನಹಳ್ಳಿಯ ಸಾಯಿ ಆಸ್ಪತ್ರೆಯಲ್ಲಿ ಕಂಡುಬರುವ ಉಚಿತ ಮತ್ತು ಮಾನವೀಯ ವೈದ್ಯಕೀಯ ಸೇವೆ ನಿಜಕ್ಕೂ ಶ್ಲಾಘನೀಯ’ ಎಂದು ಮಾಧವ ನಾಯಕ ಅವರು ಹೇಳಿದರು.