ಕೋರ್ಟಿನಲ್ಲಿ ಕೂಗಾಡಿದ ಕಾರವಾರದ ವಕೀಲರೊಬ್ಬರಿಗೆ ನ್ಯಾಯಾಲಯ ಒಂದು ದಿನದ ಮಟ್ಟಿಗೆ ಜೈಲಿಗೆ ಕಳುಹಿಸಿದೆ. ಜೊತೆಗೆ 2 ಸಾವಿರ ರೂ ದಂಡವನ್ನು ಪಾವತಿಸುವಂತೆ ಆದೇಶಿಸಿದೆ.
ಬೆಂಗಳೂರಿನ ಹೈಕೋರ್ಟಿನಲ್ಲಿ ಈ ವಿದ್ಯಮಾನ ನಡೆದಿದೆ. ಕಾರವಾರ ಮೂಲದ ವಕೀಲ ಪಂಕಜ್ ಕೌಶಿಕ್ ಅವರ ವರ್ತನೆಗೆ ನ್ಯಾಯಾಲಯ ಬೇಸರವ್ಯಕ್ತಪಡಿಸಿ ಈ ಕ್ರಮ ಜರುಗಿಸಿದೆ. ಪಂಕಜ್ ಕೌಶಿಕ್ ಅವರು ಕ್ರಿಮಿನಲ್ ವಕೀಲರಾಗಿದ್ದು, ಕುಡಿದು ನ್ಯಾಯಾಲಯಕ್ಕೆ ಹಾಜರಾಗಿದ್ದರು. ಕೋರ್ಟಿನ ಕಲಾಪಕ್ಕೆ ಅವರು ಅಡ್ಡಿಪಡಿಸಿದ್ದರು. ಈ ಬಗ್ಗೆ ಎಚ್ಚರಿಕೆ ನೀಡಿದರೂ ಸುದಾರಿಸಿಕೊಳ್ಳದೇ ನ್ಯಾಯಾದೀಶರನ್ನು ನಿಂದಿಸಿದ್ದರು. ನ್ಯಾಯಾಲಯದ ಕಲಾಪಕ್ಕೆ ಪದೇಪದೆ ಅಡ್ಡಿಪಡಿಸಿ, ಮದ್ಯದ ಅಮಲಿನಲ್ಲಿ ನ್ಯಾಯಾಲಯಕ್ಕೆ ಹಾಜರಾಗಿ ನ್ಯಾಯಾಧೀಶರ ವಿರುದ್ಧ ಕೂಗಾಡಿದ ಕಾರವಾರದ ವಕೀಲ ಪಂಕಜ್ ಕೌಶಿಕ್ ಅವರಿಗೆ ಕೋರ್ಟು ಕ್ರಿಮಿನಲ್ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಶಿಕ್ಷೆ ಪ್ರಕಟಿಸಿತು.
ವಿಚಾರಣಾ ನ್ಯಾಯಾಲಯದ ವರದಿಯನ್ನು ಆಧರಿಸಿ ಹೈಕೋರ್ಟ್ ರಿಜಿಸ್ಟ್ರಾರ್ ದಾಖಲಿಸಿಕೊಂಡಿದ್ದ ಸ್ವಯಂಪ್ರೇರಿತ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆ ನಡೆಸಿದ ನ್ಯಾ ಅನು ಶಿವರಾಮನ್ ಮತ್ತು ನ್ಯಾ ವೆಂಕಟೇಶ್ ಟಿ.ನಾಯಕ್ ಅವರನ್ನೊಳಗೊಂಡ ವಿಭಾಗೀಯ ನ್ಯಾಯಪೀಠ ಈ ಆದೇಶ ನೀಡಿತು. ವಕೀಲ ಪಂಕಜ್ ಅವರ ವರ್ತನೆ ವಿಷಯವಾಗಿ ಕಾರವಾರದ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಸಲ್ಲಿಸಿದ್ದ 2 ಪತ್ರಗಳು ಹಾಗೂ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‌ಸಿ ನ್ಯಾಯಾಧೀಶರಿಂದ ವರದಿ ಬಂದಿತ್ತು. ವರದಿಯಲ್ಲಿ ಕೌಶಿಕ್ 2 ಸಂದರ್ಭಗಳಲ್ಲಿ ನ್ಯಾಯಾಲಯದ ಕಲಾಪಕ್ಕೆ ಅಡ್ಡಿಪಡಿಸಿ ಅನುಚಿತವಾಗಿ ವರ್ತಿಸಿದ್ದರು ಎಂದು ತಿಳಿಸಲಾಗಿತ್ತು. ಈ ವರದಿ ಆಧರಿಸಿ ಹೈಕೋರ್ಟ್ 2022ರಲ್ಲಿ ಸ್ವಯಂ ಪ್ರೇರಿತವಾಗಿ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿತ್ತು.