ಸಾಮಾಜಿಕ ಕೆಲಸಗಳ ಮೂಲಕ ಗಮನಸೆಳೆಯುತ್ತಿರುವ ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ಇದೀಗ ಶ್ರಮಜೀವಿ ಮಹಿಳೆಯರಿಗಾಗಿ ಹೊಲಿಗೆ ತರಬೇತಿ ಶಿಬಿರ ಆಯೋಜಿಸಿದೆ. ಸಿದ್ದಾಪುರದ ಕುಚಗುಂಡಿಯಲ್ಲಿ ಈ ದಿನ ಈ ಶಿಬಿರಕ್ಕೆ ಚಾಲನೆ ದೊರೆತಿದೆ.
ಕುಚಗುಂಡಿಯ ಕಲ್ಯಾಣೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಹಾಗೂ ತಾರೇಸರದ ಸಭಾಭವನದಲ್ಲಿ ಉಚಿತ ಹೊಲಿಗೆ ತರಬೇತಿ ಶಿಬಿರಕ್ಕೆ ಸೋಮವಾರ ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಅನಂತಮೂರ್ತಿ ಹೆಗಡೆ ಚಾಲನೆ ನೀಡಿದ್ದಾರೆ. `ಹೊಲಿಗೆ ತರಬೇತಿಗಳ ಮೂಲಕ ಮಹಿಳೆಯರು ಸ್ವಾವಲಂಬಿಗಳಾದರೆ ಅದು ಅವರ ಜೀವನಕ್ಕೆ ಆಧಾರವಾಗುತ್ತದೆ. ಜೊತೆಗೆ ಅಗತ್ಯವಿವರವ ಪ್ರತಿಯೊಬ್ಬರಿಗೂ ಉತ್ತಮ ಬಟ್ಟೆ ಸಿಗಲಿದೆ’ ಎಂದು ಅವರು ಹೇಳಿದ್ದಾರೆ. `ಬದುಕಿನ ದೊಡ್ಡ ರೋಗ ಎಂದರೆ ಅದು ಬಡತನ. ಬಡತನವನ್ನು ಹೋಗಲಾಡಿಸಲು ಹೊಲಿಗೆ ಉದ್ಯೋಗ ಮಹಿಳೆಯರಿಗೆ ಬಹಳ ಅನುಕೂಲವಾಗಲಿದೆ. ಹೊಲಿಗೆ ಯನ್ನು ಪ್ರತಿಯೊಬ್ಬ ಮಹಿಳೆಯರೂ ಕಲಿತುಕೊಳ್ಳಬೇಕು. ಮನೆಯಲ್ಲೆ ಕುಳಿತು ಆರ್ಥಿಕ ಸ್ಥಿತಿಯನ್ನು ಸುಧಾರಿಸಿಕೊಳ್ಳಬೇಕು’ ಎಂದವರು ಹೇಳಿದ್ದಾರೆ.
`ಮನುಷ್ಯನ ಜೀವನದ ಕೊನೆಯವರೆಗೂ ಕಲಿಕೆ ನಿರಂತರವಾಗಿರಲಿದೆ. ಪ್ರತಿನಿತ್ಯ ಒಂದಲ್ಲ ರೀತಿಯಲ್ಲಿ ನಾವು ಕಲಿಯುತ್ತಲೇ ಇರುತ್ತೇವೆ. ಪ್ರತಿಯೊಬ್ಬರು ಮೊದಲು ಕಲಿಯಬೇಕು. ನಂತರ ಸಂಪಾದಿಸಬೇಕು. ಈ ನಿಟ್ಟಿನಲ್ಲಿ ಈ ಶಿಬಿರ ಆಯೋಜಿಸಿದ್ದು, ನುರಿತ ತರಬೇತಿದಾರರ ಮಾತನ್ನು ಎಲ್ಲರೂ ಪಾಲಿಸಬೇಕು’ ಎಂದವರು ಕರೆ ನೀಡಿದರು. ಹಸ್ರಗೋಡ ಗ್ರಾಪಂ ಮಾಜಿ ಅಧ್ಯಕ್ಷ ಪ್ರದೀಪ ಹೆಗಡೆ ಕರ್ಜಗಿ ಅವರು ಮಾತನಾಡಿ `ಹಳ್ಳಿಗಳಲ್ಲಿನ ಮಹಿಳೆಯರಿಗೆ ಸ್ವ ಉದ್ಯೋಗ ತರಬೇತಿ ನೀಡಬೇಕು ಎಂಬ ಬಹುದೊಡ್ಡ ಕನಸು ಅನಂತಮೂರ್ತಿ ಹೆಗಡೆ ಅವರದ್ದಾಗಿತ್ತು. ಅದನ್ನು ಅವರು ಈಡೇರಿಸಿದ್ದು, ಮಹಿಳೆಯರು ಸ್ವ ಉದ್ಯೋಗದಿಂದ ಕುಟುಂಬ ನಿರ್ವಹಣೆ ಮಾಡುವ ಶಕ್ತಿ ಬೆಳೆಸಿಕೊಳ್ಳಬೇಕು’ ಎಂದರು.
ನಾರಾಯಣ ಹೆಗಡೆ ತಾರೇಸರ ಅವರು ಮಾತನಾಡಿ `ಹೊಲಿಗೆ ಕಲಿಯುವುದು ಆರ್ಥಿಕ ಸದೃಢತೆಗೆ ಇರುವ ಸುಲಭ ಮಾರ್ಗ. ನಮ್ಮೂರಿನಲ್ಲಿ ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಉಚಿತ ಹೊಲಿಗೆ ಶಿಬಿರ ಆರಂಭ ಗೊಂಡಿರುವುದು ಸಂತಸದ ಸಂಗತಿ’ ಎಂದರು. ಈ ಸಂದರ್ಭದಲ್ಲಿ ಸುಬ್ರಾಯ ಹೆಗಡೆ ಬೇಣದಮನೆ , ಆರ್ ಜಿ ಭಟ್ ಯಲೂಗಾರ, ನಾರಾಯಣ ಹೆಗಡೆ ತಾರೇಸರ, ಗಣೇಶ ಹೆಗಡೆ ಶಮೆಮನೆ, ನವೀನ ಹೆಗಡೆ ತಾರೇಸರ ಅವರು ಇದ್ದರು. ವೀಣಾ ಕೊಳಗಿಬೀಸ್, ಆಶಾ ಶಿರಸಿ ಅವರು ಈ ತರಬೇತಿ ನಡೆಸಿಕೊಟ್ಟರು. ಒಂದು ತಿಂಗಳ ಕಾಲ ಈ ತರಬೇತಿ ನಡೆಯಲಿದೆ.