ಜೊಯಿಡಾ ರಾಮನಗರದಲ್ಲಿನ ಸಾತೇರಿ ಹಾಗೂ ನಾಗನಾಥ ಮಂದಿರಕ್ಕೆ ಕಳ್ಳರು ನುಗ್ಗಿದ್ದಾರೆ. ಅಲ್ಲಿನ ನಾಗಮೂರ್ತಿ, ಕಾಣಿಕೆ ಡಬ್ಬಿಯನ್ನು ಕಳ್ಳರು ಅಪಹರಿಸಿದ್ದಾರೆ. ಇದನ್ನು ಅರಿತ ಭಕ್ತರು ದೇವರಿಗೆ ರಕ್ಷಣೆ ಒದಗಿಸುವಂತೆ ಕೋರಿ ಪೊಲೀಸರ ಮೊರೆ ಹೋಗಿದ್ದಾರೆ.
ರಾಮನಗರದ ಪ್ರಸಿದ್ಧ ಸಾತೇರಿ ಹಾಗೂ ನಾಗನಾಥ ದೇವಾಲಯಗಳು ಒಂದೇ ಆವರಣದಲ್ಲಿವೆ. ಇದೇ ಆವರಣಕ್ಕೆ ರಾತ್ರಿ ವೇಳೆ ಪ್ರವೇಶಿಸಿರುವ ಕಳ್ಳರು ದೇವಾಲಯದ ಬೀಗವನ್ನು ಮುರಿದು ಒಳಗೆ ನುಗ್ಗಿದ್ದಾರೆ. ಬಳಿಕ ನಾಗನಾಥ ದೇವಾಲಯದಲ್ಲಿದ್ದ ಮೂರು ಬೆಳ್ಳಿ ನಾಗಮೂರ್ತಿಗಳನ್ನು ಕಳವು ಮಾಡಿದ್ದಾರೆ. ಅಷ್ಟೇ ಅಲ್ಲದೆ, ಕಾಣಿಕೆ ಡಬ್ಬಿಯನ್ನು ಒಡೆದು ಅದರಲ್ಲಿದ್ದ 12 ಸಾವಿರಕ್ಕೂ ಅಧಿಕ ಹಣವನ್ನೂ ದೋಚಿಕೊಂಡು ಪರಾರಿಯಾಗಿದ್ದಾರೆ. ರಾತ್ರಿ ವೇಳೆ ನಡೆದಿರುವ ಈ ಕೃತ್ಯ ಬೆಳಗಿನ ಜಾವ ದೇವಾಲಯದ ಪೂಜಾ ಕಾರ್ಯಕ್ಕೆ ಅರ್ಚಕರು ಆಗಮಿಸಿದಾಗ ಬೆಳಕಿಗೆ ಬಂದಿದೆ. ದೇವಾಲಯದ ಬೀಗ ಮುರಿದಿರುವುದು ಹಾಗೂ ಒಳಭಾಗದಲ್ಲಿ ಕಳ್ಳತನ ನಡೆದಿರುವುದು ಕಂಡುಬAದ ತಕ್ಷಣ ಆಡಳಿತ ಮಂಡಳಿಗೆ ಮಾಹಿತಿ ನೀಡಲಾಗಿದೆ. ನಂತರ ರಾಮನಗರ ಪೊಲೀಸರಿಗೆ ವಿಷಯ ತಿಳಿಸಲಾಗಿದ್ದು, ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.
ದೇವಾಲಯದ ಆವರಣ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಳ್ಳರ ಸುಳಿವು ಪತ್ತೆಹಚ್ಚಲು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಕಳ್ಳರು ಯಾವ ಮಾರ್ಗದಿಂದ ದೇವಾಲಯಕ್ಕೆ ಬಂದಿದ್ದರು? ಕೃತ್ಯ ಎಸಗಿದ ಬಳಿಕ ಯಾವ ದಿಕ್ಕಿನಲ್ಲಿ ಪರಾರಿಯಾಗಿದ್ದಾರೆ? ಎಂಬುದರ ಬಗ್ಗೆಯೂ ಪರಿಶೀಲನೆ ನಡೆಯುತ್ತಿದೆ. ಸಿಸಿಟಿವಿ ದೃಶ್ಯಗಳು ಲಭ್ಯವಿದ್ದಲ್ಲಿ ಅವುಗಳ ಮೂಲಕ ಆರೋಪಿಗಳ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ. ಕರಾವಳಿ ಭಾಗದಲ್ಲಿ ಇತ್ತೀಚೆಗೆ ದೇವಾಲಯ ಕಳ್ಳತನದ ಪ್ರಕರಣಗಳು ಪೊಲೀಸರಿಗೆ ಸವಾಲಾಗಿದ್ದವು. ಇದೀಗ ಮಲೆನಾಡು ಭಾಗದಲ್ಲೂ ದೇವಾಲಯವನ್ನು ಗುರಿಯಾಗಿಸಿಕೊಂಡು ಕಳ್ಳತನ ನಡೆದಿರುವುದು ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ.