ಕುಮಟಾದ ಮಾಬ್ಲು ಗೌಡ ಅವರ ಅಜ್ಜನ ಹೆಸರಿನಲ್ಲಿದ್ದ ಬೇಣದಲ್ಲಿ ಅವರು ಗೇರು ಗಿಡಗಳನ್ನು ಬೆಳೆಸಿದ್ದು, 4 ಜನ ಸೇರಿ ಅದನ್ನು ನಾಶ ಮಾಡಿದ್ದಾರೆ. ಮಾಬ್ಲು ಗೌಡ ಅವರ ಸಹೋದರರೇ ಮತ್ತೊಬ್ಬರ ಜೊತೆ ಸೇರಿ ಈ ಕೃತ್ಯ ನಡೆಸಿದ್ದಾರೆ.
ಕುಮಟಾದ ಉಪ್ಪಿನಪೊಟ್ಟಣದ ಕೆಳಗಿನಕೇರಿ ಮಲವಳ್ಳಿಯ ಮಾಬ್ಲು ಜಟ್ಟು ಗೌಡ ಅವರು ವಾಸವಾಗಿದ್ದಾರೆ. ಅದೇ ಗ್ರಾಮದ ಸರ್ವೇ ನಂ 47ರಲ್ಲಿ ಮಾಬ್ಲು ಗೌಡ ಅವರ ಅಜ್ಜನ ಹೆಸರಿನಲ್ಲಿ ಭೂಮಿಯಿದೆ. ಆ ಭೂಮಿಯಲ್ಲಿ ಮಾಬ್ಲು ಗೌಡ ಅವರು ಗೇರು ಗಿಡಗಳನ್ನು ನೆಟ್ಟಿದ್ದು, ಅದರ ಫಲ ಪಡೆಯುತ್ತಿದ್ದಾರೆ. ಆದರೆ, ಇದನ್ನು ಸಹಿಸದ ಮಾಬ್ಲು ಗೌಡ ಅವರ ತಮ್ಮಂದಿರು ಆ ಗೇರು ಗಿಡಗಳನ್ನು ಕಡಿದು ಹಾಕಿದ್ದಾರೆ.
ನಾಗು ಗೌಡ, ಸುಬ್ರಾಯ ಗೌಡ ಹಾಗೂ ಅಣ್ಣಪ್ಪ ಗೌಡ ಅವರು ಸೇರಿ ಕೆಳಗಿನಕೇರಿ ಮಲವಳ್ಳಿಯ ಕುಸುಮಾಕರ ನಾರಾಯಣ ಗೌಡ ಅವರ ಬಳಿ ಬಂದಿದ್ದಾರೆ. ಮಾಬ್ಲು ಗೌಡ ಅವರು ಅನುಭವಿಸುತ್ತಿರುವ ಭೂಮಿಯಲ್ಲಿನ ಗೇರು ಗಿಡಗಳನ್ನು ನಾಶ ಮಾಡುವ ಬಗ್ಗೆ ಅವರೆಲ್ಲರೂ ಚರ್ಚಿಸಿದ್ದಾರೆ. ಅದರಂತೆ, ಅಗಸ್ಟ 18ರಂದು ಅಲ್ಲಿ ದಾಳಿ ಮಾಡಿ ಎಲ್ಲಾ ಗೇರು ಗಿಡಗಳನ್ನು ನೆಲಸಮ ಮಾಡಿದ್ದಾರೆ. 16 ಸಾವಿರ ರೂ ನಷ್ಟ ಅನುಭವಿಸಿದ ಮಾಬ್ಲು ಗೌಡ ಅವರು ಇನ್ನಷ್ಟು ಹಣ ಖರ್ಚು ಮಾಡಿ ಈ ಬಗ್ಗೆ ಕೋರ್ಟಿನ ಮೆಟ್ಟಿಲೇರಿದ್ದಾರೆ.
ನ್ಯಾಯಾಲಯದ ಸೂಚನೆ ಮೇರೆಗೆ ಕುಮಟಾ ಪೊಲೀಸರು ಈ ಬಗ್ಗೆ ಪರಿಶೀಲಿಸಿದ್ದು, ಗೇರು ಗಿಡ ನಾಶ ಮಾಡಿದ ಕುಸುಮಾಕರ ನಾರಾಯಣ ಗೌಡ ಅವರ ವಿರುದ್ಧ ಕೇಸು ಹಾಕಿದ್ದಾರೆ.