ಗೋಕರ್ಣದ ವಿದ್ಯಾ ತಾಮ್ರಗೌರಿ ಅವರ ಮನೆಯಲ್ಲಿ ನಡೆದ ಉಪನಯನಕ್ಕೆ ಹೋಗಿದ್ದ ಹಿಲ್ಲೂರಿನ ಶ್ರೀದೇವಿ ಹೆಬ್ಬಾರ್ ಹಾಗೂ ಶೇವಕಾರಿನ ಪ್ರೇಮಾ ಹೆಬ್ಬಾರ್ ಅವರ ಚಿನ್ನಾಭರಣ ಕದ್ದಿದ್ದ ಭಟ್ಕಳದ ಪರಮೇಶ್ವರ ನಾಯ್ಕ ಅವರು ಪೊಲೀಸರ ಬಲೆಗೆ ಬಿದ್ದಿದ್ದಾರೆ. 10 ಲಕ್ಷ ರೂ ಮೌಲ್ಯದ ಚಿನ್ನಾಭರಣಗಳನ್ನು ಪೊಲೀಸರು ಜಪ್ತು ಮಾಡಿದ್ದಾರೆ.
ಮಾರ್ಚ 27 ಹಾಗೂ 28ರಂದು ಗೋಕರ್ಣದ ರಥಬೀದಿಯ ವಿದ್ಯಾ ಮಹಾಬಲೇಶ್ವರ ತಾಮ್ರಗೌರಿ ಅವರ ಮನೆಯಲ್ಲಿ ಉಪನಯನ ಕಾರ್ಯಕ್ರಮವೊಂದು ನಡೆದಿತ್ತು. ಆ ಕಾರ್ಯಕ್ರಮಕ್ಕೆ ಅಂಕೋಲಾ ಹಿಲ್ಲೂರಿನ ಶ್ರೀದೇವಿ ಹೆಬ್ಬಾರ್ ಹಾಗೂ ಶೇವಕಾರಿನ ಪ್ರೇಮಾ ಹೆಬ್ಬಾರ್ ಅವರು ಆಗಮಿಸಿದ್ದರು. ಅವರು ತಂಗಿದ್ದ ಪಕ್ಕದ ಕೊಠಡಿಯಲ್ಲಿ ಭಟ್ಕಳ ಹೆಬಳೆ ಗಾಂಧಿನಗರದ ಪರಮೇಶ್ವರ ಮಹಾದೇವ ನಾಯ್ಕ ಅವರು ತಂಗಿದ್ದರು. ಪರಮೇಶ್ವರ ನಾಯ್ಕ ಅವರು ಆ ಸಹೋದರಿಯರು ಧರಿಸಿದ್ದ ಚಿನ್ನದ ಮೇಲೆ ಕಣ್ಣು ಹಾಕಿದ್ದು, ಕಾರ್ಯಕ್ರಮ ಮುಗಿದ ಮೇಲೆ ಅವರು ಬ್ಯಾಗಿನಲ್ಲಿರಿಸಿದ್ದ ಚಿನ್ನವನ್ನು ಉಪಾಯವಾಗಿ ಎಗರಿಸಿದ್ದರು.
ಕಳ್ಳತನದ ಬಗ್ಗೆ ಶ್ರೀದೇವಿ ಹೆಬ್ಬಾರ್ ಅವರು ಪೊಲೀಸ್ ದೂರು ನೀಡಿದ್ದರು. ಗೋಕರ್ಣ ಪಿಐ ಶ್ರೀಧರ ಎಸ್ ಆರ್ ಅವರು ಪ್ರಕರಣದ ತನಿಖೆ ಶುರು ಮಾಡಿದ್ದು, ವಿವಿಧ ಆಯಾಮಗಳಲ್ಲಿ ಶೋಧ ನಡೆಸಿದರು. ಆದರೆ, ಆರು ತಿಂಗಳಾದರೂ ಕಳ್ಳರ ಬಗ್ಗೆ ಸುಳಿವು ಸಿಕ್ಕಿರಲಿಲ್ಲ. ಕಳೆದ 20 ವರ್ಷದ ಎಲ್ಲಾ ಕಳ್ಳತನ ಪ್ರಕರಣದ ವರದಿ ಗಮನಿಸಿದ ಪೊಲೀಸರು ಇಲ್ಲಿನ ಕಳ್ಳತನದ ಬಗ್ಗೆ ಹೋಲಿಸಿ ನೋಡಿದರು. ಸಣ್ಣ ಸುಳಿವಿನ ಆಧಾರದಲ್ಲಿ ಪರಮೇಶ್ವರ ನಾಯ್ಕ ಅವರನ್ನು ವಿಚಾರಣೆಗೆ ಒಳಪಡಿಸಿದರು. ಕಳೆದ 10 ವರ್ಷಗಳ ಹಿಂದೆಯೇ ಊರು ಬಿಟ್ಟಿದ್ದ ಪರಮೇಶ್ವರ ನಾಯ್ಕ ಅವರು ಆಗಾಗ ಅಲ್ಲಲ್ಲಿ ಕಳ್ಳತನ ಮಾಡಿ, ಐಷಾರಾಮಿ ಜೀವನ ನಡೆಸುತ್ತಿದ್ದರು. ಕಾರವಾರ, ಅಂಕೋಲಾ, ಕುಮಟಾ, ಭಟ್ಕಳ, ಉಡುಪಿ, ಬೆಳಗಾವಿ ಸೇರಿ 33 ಕಡೆ ಕಳ್ಳತನ ಮಾಡಿದ್ದ ಪರಮೇಶ್ವರ ನಾಯ್ಕ ಅವರು 10 ಕೇಸುಗಳಲ್ಲಿ ಶಿಕ್ಷೆಯನ್ನು ಅನುಭವಿಸಿದ್ದರು. ಅದಾಗಿಯೂ, ಅವರು ಕಳ್ಳತನವನ್ನು ಮಾತ್ರ ಬಿಟ್ಟಿರಲಿಲ್ಲ. ಗೋಕರ್ಣದಲ್ಲಿನ ಕಳ್ಳತನ ಪ್ರಕರಣದಲ್ಲಿ ಅವರು ಮತ್ತೆ ಸಿಕ್ಕಿಬಿದ್ದು ಜೈಲು ಸೇರಿದರು.
ಇದನ್ನು ಓದಿ: ಮುಂಜಿ ಮನೆಯಲ್ಲಿ ಚಿನ್ನ ಕಳ್ಳತನ!
ಪರಮೇಶ್ವರ ನಾಯ್ಕ ಅವರು ಶೇ 30ರಷ್ಟು ಚಿನ್ನವನ್ನು ಮಾರಿದ್ದು ಶೇ 70ರಷ್ಟು ಚಿನ್ನವನ್ನು ಪೊಲೀಸರು ಜಪ್ತು ಮಾಡಿದ್ದಾರೆ. ಪಿಐ ಶ್ರೀಧರ ಅವರ ಜೊತೆ ಪಿಸೈ ಸುನಿಲ, ಅನಿಲ, ಹವಾಲ್ದಾರ ರಾಜೇಶ ನಾಯ್ಕ, ವಸಂತ ನಾಯ್ಕ, ಜಿ ಬಿ ರಾಣೆ, ಪೊಲೀಸ್ ಸಿಬ್ಬಂದಿ ಶ್ರೀಕಾಂತ ಕೆ, ಪರಮೇಶ್ವರ ಬೆಂಡ್ಲಗಟ್ಟಿ, ಮಣಿಕಂಠ ಗೌಡ, ಮದನ ನಾಯ್ಕ, ಶ್ರವಣಕುಮಾರ, ಸಂತೋಷ ಮಾಳಗೌಡರ್ ಅವರು ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ.