ಅಂಕೋಲಾ ಹಿಲ್ಲೂರಿನ ಶ್ರೀದೇವಿ ಹೆಬ್ಬಾರ್ ಹಾಗೂ ಶೇವಕಾರಿನ ಪ್ರೇಮಾ ಹೆಬ್ಬಾರ್ ಅವರ ಬಳಿಯಿದ್ದ ಚಿನ್ನಾಭರಣಗಳು ಕಳ್ಳತನವಾಗಿದೆ. ಗೋಕರ್ಣದಲ್ಲಿರುವ ಸಂಬoಧಿಕರ ಮನೆಗೆ ಹೋದಾಗ ಅವರಿಬ್ಬರು ತಮ್ಮ ಬಳಿಯಿದ್ದ ಆಭರಣ ಕಳೆದುಕೊಂಡಿದ್ದಾರೆ.
ಗೋಕರ್ಣದ ರಥಬೀದಿಯಲ್ಲಿರುವ ವಿದ್ಯಾ ಮಹಾಬಲೇಶ್ವರ ತಾಮ್ರಗೌರಿ ಅವರ ಮನೆಯಲ್ಲಿ ಧಾರ್ಮಿಕ ಕಾರ್ಯಕ್ರಮವನ್ನು ನಿಶ್ಚಯಿಸಲಾಗಿತ್ತು. ವಿದ್ಯಾ ತಾಮ್ರಗೌರಿ ಅವರು ತಮ್ಮ ಮೊಮ್ಮಗನ ಮುಂಜಿಗೆ ಆಗಮಿಸುವಂತೆ ಬಂಧು-ಮಿತ್ರರಿಗೆ ಆಮಂತ್ರಣ ನೀಡಿದ್ದರು. ಬ್ರಹ್ಮೋಪದೇಶ ಕಾರ್ಯಕ್ರಮದಲ್ಲಿ ಭಾಗವಹಿಸುವುದಕ್ಕಾಗಿ ಅಂಕೋಲಾ ತಿಂಗಳಬೈಲಿನ ಶ್ರೀದೇವಿ ಅನಂತ ಹೆಬ್ಬಾರ್ ಅವರು ಅಕ್ಕನ ಮನೆಗೆ ಹೋಗಿದ್ದರು. ಗ್ರಾಮ ಪಂಚಾಯತ ಸದಸ್ಯೆಯಾಗಿರುವ ಹೆಗ್ಗಾರ್ ಶೇವಕಾರಿನ ಪ್ರೇಮಾ ರಮೇಶ ಹೆಬ್ಬಾರ್ ಅವರು ಸಹ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮಾರ್ಚ 27ರ ರಾತ್ರಿ ಅವರಿಬ್ಬರು ಅಲ್ಲಿಯೇ ವಸತಿ ಹೂಡಿದ್ದರು. ಆ ದಿನ ಎಲ್ಲಾ ಧಾರ್ಮಿಕ ಕಾರ್ಯಕ್ರಮ ಮುಗಿಸಿ ಮಲಗುವಾಗ ರಾತ್ರಿ 11.55ರ ಸಮಯವಾಗಿತ್ತು. ಆ ವೇಳೆ ಅವರ ಬಳಿಯಿದ್ದ ಚಿನ್ನಾಭರಣಗಳೆಲ್ಲವೂ ಸರಿಯಾಗಿದ್ದವು. ಮರುದಿನ ಬೆಳಗ್ಗೆ 6 ಗಂಟೆಗೆ ಎದ್ದು ನೋಡಿದಾಗ ಕಂಠಿಸರ, ಚಿನ್ನದ ಚೈನ್, ಉಂಗುರ, ಕಿವಿಗೆ ಹಾಕುವ ಮಕ್ಕ, ಕಿವಿಯ ಸರಪಳಿ, ಕುಡುಕು ಮತ್ತು ಜುಮುಕಿ ಸೇರಿ ವಿವಿಧ ಆಭರಣಗಳು ಕಣ್ಮರೆಯಾಗಿದ್ದವು. ಪಕ್ಕದ ಮನೆಯ ಶೌಚಾಲಯದ ದಾರಿಯಿಂದ ಬಂದ ಕಳ್ಳರು ಹಾಲಿನಲ್ಲಿದ್ದ ಚಾವಿ ಬಳಸಿ ಕೋಣೆ ಪ್ರವೇಶಿಸಿದ್ದು, ಮಹಿಳೆಯರ ಆಭರಣ ಕದ್ದು ಪರಾರಿಯಾದ ಅನುಮಾನ ಕಾಡಿತು.
ಶ್ರೀದೇವಿ ಹೆಬ್ಬಾರ್ ಅವರ ಬಳಿಯಿದ್ದ 3.60 ಲಕ್ಷ ರೂ ಮೌಲ್ಯದ 30 ಗ್ರಾಂ ಬಂಗಾರದ ಕಂಠಿಸರ, 1.80 ಲಕ್ಷ ರೂ ಮೌಲ್ಯದ 15 ಗ್ರಾಮಿನ ಚಿನ್ನದ ಚೈನ್, 27 ಸಾವಿರ ರೂ ಮೌಲ್ಯದ 6 ಗ್ರಾಂ ತೂಕದ ಉಂಗುರವನ್ನು ಕಳ್ಳರು ಎಗರಿಸಿದ್ದರು. ಪ್ರೇಮಾ ಹೆಬ್ಬಾರ್ ಅವರ ಬಳಿಯಿದ್ದ 92 ಸಾವಿರ ರೂ ಮೌಯದ ಕಿವಿಗೆ ಹಾಕುವ ಮಕ್ಕ, 4 ಗರಾಮ ತೂಕದ 48 ಸಾವಿರ ರೂ ಮೌಲ್ಯದ ಕಿವಿಯ ಸರಪಳಿ, 60 ಸಾವಿರ ರೂ ಮೌಲ್ಯದ ಐದು ಗ್ರಾಂ ತೂಕದ ಕುಡುಕು ಹಾಗೂ ಜುಮಕಿಯನ್ನು ಅಪಹರಿಸಿದ್ದರು. ಎಲ್ಲಾ ಸೇರಿ 10.44 ಲಕ್ಷ ರೂ ಮೌಲ್ಯದ ಚಿನ್ನಾಭರಣಗಳು ಕಳ್ಳರ ಪಾಲಾದವು.
ಈ ವಿಷಯದ ಬಗ್ಗೆ ಶ್ರೀದೇವಿ ಹೆಬ್ಬಾರ್ ಅವರು ಮಾಹಿತಿ ನೀಡಿದ್ದು, ಗೋಕರ್ಣ ಪೊಲೀಸರು ಕಳ್ಳರ ಹುಡುಕಾಟ ನಡೆಸಿದರು. ಸದ್ಯ ಚಿನ್ನಾಭರಣ ಕಾಣೆಯಾದ ಬಗ್ಗೆ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.