ಬಿಜೆಪಿ ಆಯೋಜಿಸಿರುವ ಬಳ್ಳಾರಿ ಚಲೋ ಕಾರ್ಯಕ್ರಮದಲ್ಲಿ ಕಾರವಾರದ ಮಾಜಿ ಶಾಸಕಿ ರೂಪಾಲಿ ನಾಯ್ಕ ಅವರು ಭಾಗವಹಿಸಿದ್ದು, ಮೊದಲ ದಿನ ಅವರು 5ಕಿಮೀ ನಡೆದಿದ್ದಾರೆ. 2ಕಿಮೀ ನಡೆದ ನಂತರ ಅವರು ಆಯಾಸಗೊಂಡಿದ್ದು, ಕೆಲ ಕಾಲ ವಿರಾಮ ತೆಗೆದುಕೊಂಡು ಮತ್ತೆ ಅವರು 3ಕಿಮೀ ಸಂಚರಿಸಿದ್ದಾರೆ.
ಈ ದಿನ ಅಲ್ಲಿಯೇ ವಸತಿ ಹೂಡಲಿರುವ ರೂಪಾಲಿ ನಾಯ್ಕ ಅವರು ನಾಳೆಯೂ ತಮ್ಮ ನಡಿಗೆಯನ್ನು ಮುಂದುವರೆಸಲಿದ್ದಾರೆ. ತಮ್ಮ ನಡಿಗೆಯ ಅವಧಿಯಲ್ಲಿ ಅವರು ಕಾಂಗ್ರೆಸ್ ಸರ್ಕಾರದ ವಿರುದ್ಧ ಸಾಕಷ್ಟು ಆಕ್ರೋಶವ್ಯಕ್ತಪಡಿಸಿದ್ದಾರೆ. ರೂಪಾಲಿ ನಾಯ್ಕ ಅವರ ಸುತ್ತ ಪೊಲೀಸರು ಸಂಚರಿಸಿದ್ದು, ಈ ಪ್ರತಿಭಟನಾ ಮೆರವಣಿಗೆಗೆ ಭಾರೀ ಭದ್ರತೆ ಕಂಡುಬAದಿತು. ಅಲ್ಲಲ್ಲಿ ನೀರು ಕುಡಿಯುತ್ತ ತಮ್ಮ ದಣಿವು ಆರಿಸಿಕೊಳ್ಳುತ್ತ ರೂಪಾಲಿ ನಾಯ್ಕ ಅವರು ಈ ದಿನ ನಡಿಗೆ ಮುಗಿಸಿದರು. ಪಾದಯಾತ್ರೆಯ ಅವಧಿಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಮೊಳಗಿಸಿದರು. ರೂಪಾಲಿ ನಾಯ್ಕ ಅವರ ಜೊತೆಗಿದ್ದವರು ಸಹ ಧಿಕ್ಕಾರದ ಬೋರ್ಡುಗಳನ್ನು ಪ್ರದರ್ಶಿಸಿದರು.
ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯ ಹಾಗೂ ವಿವಿಧ ಅಕ್ರಮಗಳ ವಿರುದ್ಧ ಬಿಜೆಪಿ ಹೋರಾಟ ನಡೆಸುತ್ತಿದೆ. ಅದರ ಅಂಗವಾಗಿ ‘ಬಳ್ಳಾರಿ ಚಲೋ’ ಎಂಬ ಪಾದಯಾತ್ರೆ ಆಯೋಜಿಸಿದೆ. ಬಿಜೆಪಿ ರಾಜ್ಯ ಉಪಾಧ್ಯಕ್ಷೆಯೂ ಆಗಿಉವ ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕಿ ರೂಪಾಲಿ ನಾಯ್ಕ ಅವರು ಅತ್ಯಂತ ಉತ್ಸಾಹದಿಂದ ಈ ಪಾದಯಾತ್ರೆಯಲ್ಲಿ ಭಾಗವಹಿಸಿದ್ದಾರೆ. ರಾಯಚೂರು ಜಿಲ್ಲೆಯ ಲಿಂಗಸುಗೂರಿನಿoದ ಶುರುವಾದ ಈ ಪಾದಯಾತ್ರೆ ಬಳ್ಳಾರಿಯಲ್ಲಿ ಕೊನೆಯಾಗಲಿದ್ದು, ಎಲ್ಲಾ ದಿನವೂ ಪಾದಯಾತ್ರೆಯಲ್ಲಿ ಭಾಗವಹಿಸುವ ವಿಶ್ವಾಸದಲ್ಲಿ ರೂಪಾಲಿ ನಾಯ್ಕ ಅವರಿದ್ದಾರೆ.
ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಜನಸಾಮಾನ್ಯರು ಎದುರಿಸುತ್ತಿರುವ ಸಮಸ್ಯೆಗಳು, ಸರ್ಕಾರದ ವೈಫಲ್ಯಗಳು ಹಾಗೂ ಭ್ರಷ್ಟಾಚಾರದ ಆರೋಪಗಳ ವಿರುದ್ಧ ಬಿಜೆಪಿಗರು ಮಾತನಾಡಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ, ವಿಪಕ್ಷ ನಾಯಕ ಆರ್ ಅಶೋಕ್, ಪ್ರಮುಖರಾದ ಛಲವಾದಿ ನಾರಾಯಣ ಸ್ವಾಮಿ, ಸಿ ಟಿ ರವಿ ಸೇರಿದಂತೆ ಅನೇಕರು ಈ ಪಾದಯಾತ್ರೆಯಲ್ಲಿ ಭಾಗವಹಿಸಿದ್ದಾರೆ.