ಯಲ್ಲಾಪುರದ ಮಂಚಿಕೇರಿಯಲ್ಲಿ ಶಾಸಕ ಶಿವರಾಮ ಹೆಬ್ಬಾರ್ ಅವರು `ಪ್ರಜಾ ಸೇವೆ’ ಮಾಡಿದ್ದಾರೆ. ವಿದ್ಯುತ್, ರಸ್ತೆ, ಮನೆ, ಪಿಂಚಣಿ ಸಮಸ್ಯೆಗಳನ್ನು ಹೇಳಿಕೊಂಡು ಬಂದವರಿಗೆ ಅವರು ತುರ್ತು ಕ್ರಮ ಜರುಗಿಸುವ ಭರವಸೆ ನೀಡಿದ್ದಾರೆ.
ಜನರ ಸಮಸ್ಯೆಗಳನ್ನು ತ್ವರಿತವಾಗಿ ಸ್ಪಂದಿಸುವುದಕ್ಕಾಗಿ ರಾಜ್ಯ ಸರ್ಕಾರ ಪ್ರಜಾ ಸೇವೆ ಎಂಬ ಅಭಿಯಾನ ಶುರು ಮಾಡಿದೆ. ಯಲ್ಲಾಪುರ ತಾಲೂಕು ಆಡಳಿತವೂ ಮಂಚಿಕೇರಿಯ ರಾಜರಾಜೇಶ್ವರಿ ಸಭಾಂಗಣದಲ್ಲಿ ಶನಿವಾರ ಪ್ರಜಾ ಸೇವೆ ಕಾರ್ಯಕ್ರಮ ಆಯೋಜಿಸಿದೆ. ಬೆಳಗ್ಗೆ ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಶಿವರಾಮ ಹೆಬ್ಬಾರ್ ಅವರು ಮಧ್ಯಾಹ್ನ 2.30ರವರೆಗೆ ಜನರ ಅಹವಾಲು ಆಲಿಸಿದ್ದಾರೆ. ಬಹುತೇಕ ಜನ ರಸ್ತೆ ಸಮಸ್ಯೆ ಬಗ್ಗೆ ಅಳಲು ತೋಡಿಕೊಂಡಿದ್ದು, ಅನುದಾನದ ಆಧಾರದಲ್ಲಿ ಆ ಕೆಲಸ ಮಾಡಿಕೊಡುವುದಾಗಿ ಶಾಸಕರು ಭರವಸೆ ನೀಡಿದ್ದಾರೆ. ಅದರೊಂದಿಗೆ ವಿದ್ಯುತ್ ಸಮಸ್ಯೆ, ಪಿಂಚಣಿಗೆ ತೊಂದರೆ, ವಿಧವಾ ವೇತನ, ಕುಡಿಯುವ ನೀರಿನ ತೊಂದರೆ ಅನುಭವಿಸುತ್ತಿದ್ದವರಿಗೆ ಸ್ಥಳದಲ್ಲಿಯೇ ಪರಿಹಾರ ದೊರಕಿಸಿಕೊಡುವ ನಿಟ್ಟಿನಲ್ಲಿ ಕ್ರಮ ಜರುಗಿಸಿದ್ದಾರೆ. ಸಂಬAಧಿಸಿದ ಅಧಿಕಾರಿಗಳನ್ನು ಕರೆಯಿಸಿ ಸಭೆ ನಡೆಸಿದ ಶಿವರಾಮ ಹೆಬ್ಬಾರ್ ಆ ಸಮಸ್ಯೆ ದೂರ ಮಾಡುವ ನಿಟ್ಟಿನಲ್ಲಿ ಮಾತನಾಡಿದ್ದಾರೆ. ಅರಣ್ಯ ಅತಿಕ್ರಮಣದಾರರು ಸಹ ತಮ್ಮ ಸಮಸ್ಯೆ ಹೇಳಿಕೊಂಡಿದ್ದು `ಜಿಪಿಎಸ್ ಆದವರ ತಂಟೆಗೆ ಹೋಗಬೇಡಿ’ ಎಂದು ಅರಣ್ಯಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಕಾಲು ಸಂಕ ನಿರ್ಮಾಣ, ರಸ್ತೆ ದುರಸ್ಥಿ, ಮನೆ ಇಲ್ಲದಿರುವಿಕೆ ಸೇರಿ ಕೆಲ ವಿಷಯಗಳ ಬಗ್ಗೆ ಜನ ಈ ಸಭೆಯಲ್ಲಿ ವಿಷಯ ಮಂಡಿಸಿದ್ದಾರೆ. ಈ ಎಲ್ಲಾ ವಿಷಯಗಳ ಕುರಿತು ಪ್ರಸ್ತಾವನೆ ಸಲ್ಲಿಸುವಂತೆ ಶಿವರಾಮ ಹೆಬ್ಬಾರ್ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ರಸ್ತೆ ಸುಧಾರಣೆ, ಮನೆ ಮಂಜೂರಾತಿ, ವಿದ್ಯುತ್ ಲೈನ್ ಬದಲಾವಣೆ, ಬಸ್ ನಿಲ್ದಾಣ ನಿರ್ಮಾಣ, ಗೃಹಲಕ್ಷ್ಮಿ ಹಣ ಬಾರದಿರುವ ಬಗ್ಗೆ ಚರ್ಚಿಸಿದ್ದಾರೆ. `ಅಧಿಕಾರಿಗಳು ಮತ್ತು ಜನಸಾಮಾನ್ಯರ ಅಂತರವನ್ನು ಕಡಿಮೆ ಮಾಡಿ ಸಾವ9ಜನಿಕರಿಗೆ ತಮ್ಮ ಸಮಸ್ಯೆಯನ್ನು ನೇರವಾಗಿ ಹೇಳಿಕೊಳ್ಳಲು ಅವಕಾಶ ಕಲ್ಪಿಸುವ ದೃಷ್ಟಿಯಿಂದ ಪ್ರಜಾಸೇವೆ ಅಭಿಯಾನ ನಡೆಯುತ್ತಿದೆ’ ಎಂದು ಅವರು ಭಾಷಣ ಮಾಡಿದ್ದಾರೆ. ಜೊತೆಗೆ `ಅಧಿಕಾರಿಗಳು ತಮ್ಮ ಕಾಯ9ಶೈಲಿ ಬದಲಿಸಿಕೊಳ್ಳಬೇಕು. ಅಧಿಕಾರಶಾಹಿ ಆಡಳಿತಕ್ಕೆ ಬದಲಾಗಿ ಜನಸ್ನೇಹಿ, ಜನಪರ ಆಡಳಿತ ನೀಡಬೇಕು’ ಎಂದು ಶಿವರಾಮ ಹೆಬ್ಬಾರ್ ಅವರು ನಿರ್ದೇಶನ ನೀಡಿದ್ದಾರೆ.
ತಹಶೀಲ್ದಾರ ಎಂ ಆರ್ ಕುಲಕರ್ಣಿ, ತಾಲೂಕು ಪಂಚಾಯಿತಿ ಇಒ ರಾಜೇಶ ಧನವಾಡಕರ, ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಉಲ್ಲಾಸ ಶಾನಭಾಗ, ಪಿಐ ಸುರೇಶ ಕುಂಬಾರ, ಎಸಿಎಪ್ ಸಂಗಮೇಶ ಅವರು ಸ್ಥಳದಲ್ಲಿದ್ದು ಜನರ ಸಮಸ್ಯೆ ಆಲಿಸಿದ್ದಾರೆ.