ಶಿರಸಿಯ IDBI ಬ್ಯಾಂಕ್ ಮ್ಯಾನೇಜರ್ ಬಿಜುದೇವ್ ವಾಸುದೇವನ್ ಅವರು ಬಿಪಿ-ಶುಗರ್ ಏರಿಳಿತದ ಕಾರಣ ಸಾವನಪ್ಪಿದ್ದಾರೆ. ಇನ್ನೂ 36 ವರ್ಷದ ಅವರು ರಾತ್ರಿ ಕಳೆದು ಬೆಳಗಾಗುವುದರೊಳಗೆ ಶವವಾಗಿದ್ದಾರೆ.
ಕೇರಳದ ತಿರುವನಂತಪುರ0 ಮೂಲದ ಬಿಜುದೇವ್ ವಾಸುದೇವನ್ ಅವರು ಐಡಿಐಬಿಐ ಬ್ಯಾಂಕ್ ಉದ್ಯೋಗಿಯಾಗಿದ್ದರು. 2026ರ ಮೇ ಮಾಸದಲ್ಲಿ ಅವರನ್ನು ಶಿರಸಿಗೆ ವರ್ಗಾವಣೆ ಮಾಡಲಾಗಿತ್ತು. ಶಿರಸಿಯ ಐಡಿಐಬಿಐ ಬ್ಯಾಂಕಿನಲ್ಲಿ ಅವರು ಬ್ರಾಂಚ್ ಹೆಡ್ ಮ್ಯಾನೇಜರ್ ಆಗಿ ಕೆಲಸ ಶುರು ಮಾಡಿದ್ದರು. ಬಿಜುದೇವ್ ವಾಸುದೇವನ್ ಅವರು ಬಿಪಿ-ಶುಗರ್ ಜೊತೆ ಥೈರಾಯ್ಡ್ ಸಮಸ್ಯೆಯಿಂದ ಬಳಲುತ್ತಿದ್ದರು. ಅದಕ್ಕೆ ಚಿಕಿತ್ಸೆಯನ್ನುಪಡೆಯುತ್ತಿದ್ದರು. ಅದಾಗಿಯೂ, ಅವರು ಸಣ್ಣ ವಯಸ್ಸಿನಲ್ಲಿಯೇ ಸಾವನಪ್ಪಿದರು.
ಸೆಪ್ಟೆಂಬರ್ 25ರಂದು ಬಿಜುದೇವ್ ವಾಸುದೇವನ್ ಅವರು ಕೊನೆಯದಾಗಿ ಬ್ಯಾಂಕಿಗೆ ಹೋಗಿದ್ದರು. ಆ ದಿನ ಸಂಜೆ ಕೆಲಸ ಮುಗಿಸಿ ಬಂದವರು ರಾತ್ರಿ 9.30ಕ್ಕೆ ತಮ್ಮ ಪತ್ನಿ ಅರ್ಚನಾ ಅವರಿಗೆ ಫೋನ್ ಮಾಡಿ ಮಾತನಾಡಿದ್ದರು. ಸೆಪ್ಟೆಂಬರ್ 26ರ ಬೆಳಕು ಹರಿಯುವುದರೊಳಗೆ ಅವರು ಶವವಾಗಿದ್ದರು. 11.15 ಆದರೂ ಬಿಜುದೇವ್ ವಾಸುದೇವನ್ ಅವರ ಸುಳಿವಿಲ್ಲದ ಕಾರಣ ಬ್ಯಾಂಕ್ ಸಿಬ್ಬಂದಿ ಜಯೇಶ ಜೆ ಪಾನಿಕರ್ ವಿಚಾರಿಸಿದ್ದರು. ಆ ವೇಳೆ ಬಿಜುದೇವ್ ವಾಸುದೇವನ್ ಅವರು ಮಲಗಿದಲ್ಲಿಯೇ ಸಾವನಪ್ಪಿರುವುದು ಗಮನಕ್ಕೆ ಬಂದಿತು.
ಐಟಿ ಕಂಪನಿಯಲ್ಲಿ ಕೆಲಸ ಮಾಡುವ ಅಜಯದೇವ್ ವಾಸುದೇವನ್ ಅವರಿಗೆ ಸಹೋದರನ ಸಾವಿನ ಬಗ್ಗೆ ಗೊತ್ತಾಯಿತು. ಕೂಡಲೇ ಅವರು ಶಿರಸಿಗೆ ಧಾವಿಸಿದ್ದು, ಸಹೋದರನ ಮರಣೋತ್ತರ ಪರೀಕ್ಷೆಗೆ ಮನವಿ ಮಾಡಿದರು. ಪ್ರಕರಣ ದಾಖಲಿಸಿದ ಪೊಲೀಸರು ಶವ ಪರೀಕ್ಷೆಗೆ ಕಳುಹಿಸಿದ್ದಾರೆ.