ಶಾಂತವಾಗಿದ್ದ ಭಟ್ಕಳದಲ್ಲಿ ಗಲಭೆ ಸೃಷ್ಟಿಸುವುದಕ್ಕಾಗಿ ಕಿಡಿಗೇಡಿಗಳು ಗಣೇಶ ವಿಸರ್ಜನಾ ಮೆರವಣಿಗೆ ಹಾಗೂ ಮದರಸಾ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಎರಡು ಧರ್ಮಿಯರ ನಡುವೆ ಕಾದಾಟ ತರುವ ಸಂಚು ರೂಪಿಸಿ ವಿಕೃತಿ ಮೆರೆದಿದ್ದಾರೆ.
ಸೆಪ್ಟೆಂಬರ್ 16ರ ರಾತ್ರಿ ಭಟ್ಕಳದ ಗುಳಮಿ ರೈಲ್ವೆ ನಿಲ್ದಾಣ ಬಳಿಯ ಮದರಸಾ ಮೇಲೆ ಕಲ್ಲು ತೂರಾಟ ನಡೆದಿದೆ. ಅದೇ ವೇಳೆ ತಲಾಂದ ಸಾರ್ವಜನಿಕ ಗಣೇಶೋತ್ಸವ ಸಮಿತಿಯಿಂದ ಗಣೇಶ ವಿಗ್ರಹವನ್ನು ವಿಸರ್ಜನೆ ನಡೆಯುತ್ತಿದ್ದು, ಆ ಮೆರವಣಿಗೆಯ ಮೇಲೆಯೂ ಕಲ್ಲು ತೂರಿಬಂದಿದೆ. ಮೆರವಣಿಗೆ ತಲಾಂದದಿoದ ಆರಂಭವಾಗಿ ಗುಳಮಿ ರೈಲ್ವೆ ಬ್ರಿಡ್ಜ್ ದಾಟಿ ಮದರಸಾ ಹಾಗೂ ರೈಲ್ವೆ ನಿಲ್ದಾಣ ರಸ್ತೆಯತ್ತ ಸಾಗುತ್ತಿರುವಾಗ ಅಲ್ಲಿನ ರಾಮಚಂದ್ರ ನಾಯ್ಕ ಅವರಿಗೆ ಸೇರಿದ ಕಟ್ಟಡದ ಮೇಲಿನಿಂದ ಕಿಡಿಗೇಡಿಗಳು ಗಣೇಶ ವಿಗ್ರಹದ ಕಡೆಗೆ ಕಲ್ಲುಗಳನ್ನು ತೂರಿದ್ದಾರೆ. ಮೆರವಣಿಗೆ ಗುಳಮಿ ರೈಲ್ವೆ ಬ್ರಿಡ್ಜ್ ದಾಟಿ ರೈಲ್ವೆ ನಿಲ್ದಾಣ ರಸ್ತೆಯ ಮೂಲಕ ಸಾಗುತ್ತಿದ್ದ ವೇಳೆ ರಸ್ತೆಯ ಪಕ್ಕದ ಪ್ರಥಮ ಮಹಡಿಯಲ್ಲಿರುವ ಇಸ್ಮಾಯಿಲ್ ಸುನ್ನಿ ಜಾಮೀಯಾ ಮಸೀದಿ ಹಾಗೂ ನೆಲಮಹಡಿಯಲ್ಲಿರುವ ತಾಜುಸುನ್ನಾ ಅರೇಬಿಕ್ ಮದರಸಾ ಮೇಲೆಯೂ ಕಲ್ಲು ತೂರಾಟ ನಡೆದಿದೆ. ಇದರಿಂದ ಮಸೀದಿ ಹಾಗೂ ಮದರಸಾದ ಕಿಟಕಿ ಗಾಜುಗಳಿಗೆ ಹಾನಿಯಾಗಿವೆ. ಕಲ್ಲು ತೂರಾಟದಿಂದಾಗಿ ಭಟ್ಕಳದಲ್ಲಿ ಉದ್ವಿಘ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಪೊಲೀಸರು ಎಲ್ಲಡೆ ಕಾವಲು ಕಾಯುತ್ತಿದ್ದಾರೆ.
ಈ ಎರಡು ಕಲ್ಲು ತೂರಾಟ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ. ಸಾರ್ವಜನಿಕ ಗಣೇಶೋತ್ಸವ ಸಮಿತಿ ತಲಾಂದ ಅಧ್ಯಕ್ಷ ರಾಜು ಸಂಕಪ್ಪ ನಾಯ್ಕ ಹಾಗೂ ಬಂದರ ರಸ್ತೆ 5ನೇ ಕ್ರಾಸ್ ನಿವಾಸಿ ಅಬ್ದುಲ್ ಅಲಿಂ, ಶಾಹುಲ್ ಅಮೀನ್ ಗವಾಯಿ ಅವರು ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಆರೋಪಿತರ ಪತ್ತೆಗೆ ಮೂರು ವಿಶೇಷ ತಂಡ ರಚಿಸಿ ಹುಡುಕಾಟ ನಡೆಸಿದ್ದಾರೆ.