ಶಿರಸಿಯ ಟೆಕ್ ಪಾರ್ಕ ಕಡೆಯಿಂದ ಈ ದಿನ ಅನೇಕರಿಗೆ ವಾಟ್ಸಪ್ ಮೆಸೆಜ್ ಹೋಗಿದ್ದು, ಆ ಮೆಸೆಜ್ ಕ್ಲಿಕ್ ಮಾಡಿದರೆ ಮೋಸ ಹೋಗುವುದು ಖಚಿತ!
ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಟೆಕ್ ಪಾರ್ಕ ಪ್ರೆ ಲಿ ಎಂಬ ಕಂಪನಿ ಕಾರ್ಯನಿರ್ವಹಿಸುತ್ತಿದೆ. ಕದಂಬ ಮಾರ್ಕೇಟಿಂಗ್’ನ ಆರ್ಗಾನಿಕ್ ಸೆಂಟರ್ ಮೇಲ್ಬಾಗ ಕಂಪನಿಯ ಕಚೇರಿಯಿದೆ. ಮಾಹಿತಿಗಳ ಪ್ರಕಾರ ಸ್ಥಳೀಯ ಪ್ರತಿಭೆಗಳನ್ನು ಪ್ರೋತ್ಸಾಹಿಸಿ ಉದ್ಯೋಗ ಅವಕಾಶ ನೀಡಲು ಈ ಕಂಪನಿ ಶುರುವಾಗಿದೆ. ಗ್ರಾಮೀಣ ಭಾಗದಲ್ಲಿ ತಂತ್ರಜ್ಞಾನ ಹಾಗೂ ಕಾರ್ಪೋರೇಟ್ ವಾತಾವರಣ ಉತ್ತೇಜಿಸಲು ಈ ಕಂಪನಿ ಕೆಲಸ ಮಾಡುತ್ತಿದೆ. ಆದರೆ, ಈ ಟೆಕ್ ಪಾರ್ಕನಲ್ಲಿನ ತಂತ್ರಜ್ಞಾನವೇ ಇದೀಗ ದುರುಪಯೋಗವಾಗಿದೆ!
ಉತ್ತರ ಕನ್ನಡ ಜಿಲ್ಲೆಯಿಂದ ಪ್ರತಿ ವರ್ಷ ಸಾವಿರಾರು ಜನ ಉದ್ಯೋಗ ಅರೆಸಿ ಬೇರೆ ಬೇರೆ ಭಾಗಗಳಿಗೆ ಹೋಗುತ್ತಾರೆ. ಅದರಲ್ಲಿಯೂ ಮುಖ್ಯವಾಗಿ ಪದವೀಧರರು ಹಾಗೂ ಇಂಜಿನಿಯರ್ ಬೇರೆ ಪ್ರದೇಶಗಳಿಗೆ ಹೋಗುತ್ತಿದ್ದು, ಈ ಪ್ರತಿಭಾ ಪಲಾಯನ ತಡೆಯುವ ಉದ್ದೇಶಕ್ಕಾಗಿ ಟೆಕ್ ಪಾರ್ಕ ಹುಟ್ಟಿಕೊಂಡಿದೆ. ವರ್ಕ ಪ್ರಂ ಹೊಂ ಮಾಡುವವರಿಗೆ ಟೆಕ್ ಪಾರ್ಕ ಸಕಲ ವ್ಯವಸ್ಥೆ ಮಾಡಿಕೊಡುವುದರ ಜೊತೆ ದೊಡ್ಡ ದೊಡ್ಡ ಕಂಪನಿಗಳನ್ನು ಶಿರಸಿಗೆ ಆಹ್ವಾನಿಸುವ ಉದ್ದೇಶಹೊಂದಿದೆ. ಮಾಹಾನಗರಗಳಲ್ಲಿರುವ ಸೌಕರ್ಯವನ್ನು ಶಿರಸಿಯಂಥ ಪ್ರದೇಶದಲ್ಲಿಯೂ ನಿರ್ಮಿಸಿ ಕೊಡುವ ಭರವಸೆಯನ್ನು ಟೆಕ್ ಪಾರ್ಕ ತನ್ನ ವೆಬ್‌ಸೈಟಿನ ಮೂಲಕ ವಿವರಿಸಿದೆ. ಇಂಟರ್‌ನೆಟ್ ಸೌಲಭ್ಯ, ಪವರ್ ಬ್ಯಾಕಪ್ ಸೌಕರ್ಯಗಳೊಂದಿಗೆ ಉದ್ಯೋಗಿಗಳಿಗೆ ಊರಿನಲ್ಲಿಯೇ ಕೆಲಸ ಮಾಡುವ ಅವಕಾಶ ನೀಡುವುದಾಗಿ ಈ ಕಂಪನಿ ಹೇಳಿಕೊಂಡಿದೆ.
ಕಾರ್ಪೋರೇಟ್ ಕಂಪನಿಗಳ ಅಗತ್ಯಕ್ಕೆ ಅನುಗುಣವಾಗಿ ಯುವಕರನ್ನು ಗುರುತಿಸಿ ಅವರ ಕೌಶಲ್ಯ ಹೆಚ್ಚಳ ಹಾಗೂ ನೇಮಕಾತಿ ಪ್ರಕ್ರಿಯೆ ನಡೆಸಲು ತಂಡವಿರುವುದಾಗಿ ಕಂಪನಿ ಹೇಳಿದೆ. ಗಣ್ಯರು ಹಾಗೂ ಪ್ರತಿಭಾನ್ವಿತರು ಕಂಪನಿಯ ಒಡನಾಡಿಗಳಾಗಿರುವುದರಿಂದ ಅನೇಕರು ಟೆಕ್ ಪಾರ್ಕ ಕಂಪನಿಯ ಮೇಲೆ ಭರವಸೆಯನ್ನಿಟ್ಟಿದ್ದಾರೆ. ಹೀಗಿರುವಾಗ ಬುಧವಾರ ಕಂಪನಿಯಿoದಲೇ ಅನೇಕ ಅಪರಿಚಿತ ಸಂಖ್ಯೆಗಳಿಗೆ ಮೆಸೆಜ್ ಹೋಗಿದ್ದು, ಆ ಮೆಸೆಜ್ ತೆರೆದ ನಂತರ ಕೆಲ ಮೊಬೈಲ್ ಹ್ಯಾಂಗ್ ಆಗಿದೆ. ಬೆಳಗ್ಗೆ 11 ಗಂಟೆಯ ವೇಳೆಗೆ ಕಂಪನಿಯ ಮೊಬೈಲ್ ಸಂಖ್ಯೆಯಿAದ ಈ ಮೆಸೆಜ್ ರವಾನೆಯಾಗಿದೆ. `ಇಲ್ಲಿನ ಇನ್ವಾಯ್ಸನ್ನು ನಿಮ್ಮ ಫೈನಾನ್ಸ್ ಮ್ಯಾನೇಜರಿಗೆ ಕಳುಹಿಸಿ. ದಯವಿಟ್ಟು ಇದನ್ನು ಕಂಪ್ಯುಟರಿನಲ್ಲಿ ತೆರೆದು ಪರಿಶೀಲಿಸಿ’ ಎಂದು ಆ ಮೆಸೆಜಿನಲ್ಲಿ ಬರೆಯಲಾಗಿದೆ. ಅದರೊಂದಿಗೆ ಒಂದು ಐಎಸ್‌ಓ ಫೈಲ್ ಇದ್ದು, ಅದನ್ನು ತೆರೆದರೆ ಮೊಬೈಲ್ ಸ್ವಿಚ್ ಆಫ್ ಆಗಿ ನಂತರ ಆನ್ ಆಗಲಿದೆ. ಈ ಮೆಸೆಜನ್ನು ಕಂಪ್ಯುಟರ್’ಗೆ ಕಳುಹಿಸಿದರೆ ಕಂಪ್ಯುಟರ್ ಸಹ ಹ್ಯಾಕ್ ಆಗುವ ಸಾಧ್ಯತೆಗಳಿವೆ. ಜೊತೆಗೆ ಮೊಬೈಲ್ ಹಾಗೂ ಕಂಪ್ಯುಟರ್ ಬಳಸುವವರ ವೈಯಕ್ತಿಕ ಮಾಹಿತಿ ಸೋರಿಕೆಯಾಗುವ ಎಲ್ಲಾ ಲಕ್ಷಣಗಳು ಇವೆ.
ಮೆಸೆಜ್ ಬಂದ ಸಂಖ್ಯೆಗೆ ಟೆಕ್ ಪಾರ್ಕನ ಹೆಸರಿದೆ. ಈ ಕುರಿತು ಪ್ರಶ್ನಿಸಿದಾಗ `ನಮ್ಮ ಸಿಬ್ಬಂದಿ ಮೊಬೈಲ್ ಹ್ಯಾಕ್ ಆಗಿದೆ. ಹೀಗಾಗಿ ಆ ಮೆಸೆಜ್ ರವಾನೆಯಾಗಿದೆ. ಅದನ್ನು ನಿರ್ಲಕ್ಷಿಸಿ’ ಎಂದು ಟೆಕ್ ಪಾರ್ಕನ ವಿನಾಯಕ ಹೆಗಡೆ ಅವರು ಹೇಳಿದ್ದಾರೆ.