SIR ಪ್ರಕ್ರಿಯೆಯಲ್ಲಿನ ಲೋಪ ಖಂಡಿಸಿ ಕಾಂಗ್ರೆಸ್ಸಿಗರು ಕಾರವಾರದಲ್ಲಿ ಪ್ರತಿಭಟನೆ ನಡೆಸಿದ್ದು, ಬಿಜೆಪಿಯಿಂದ ಆಯ್ಕೆಯಾಗಿದ್ದ ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ಮುಂಚೂಣಿಯಲ್ಲಿ ಕಾಣಿಸಿಕೊಂಡಿದ್ದಾರೆ. `ಬಿಜೆಪಿಯಿಂದ ಹೊರ ಬಂದ ಕಾರಣ ನಾನು ಯಾವ ಪಕ್ಷದ ಬಂಧನದಲ್ಲಿಯೂ ಇಲ್ಲ’ ಎಂದವರು ಮಾಧ್ಯಮದ ಎದುರು ಹೇಳಿದ್ದಾರೆ.
`ಯಾರೇ ಬಿಜೆಪಿಗೆ ಹೋದರೂ ಅವರನ್ನು ವಾಷಿಂಗ್ ಮಿಷನ್’ಗೆ ಹಾಕಿದಂತೆ ಕ್ಲೀನ್ ಮಾಡಲಾಗುತ್ತದೆ. ನನ್ನನ್ನೂ ಸಹ ಅದೇ ರೀತಿ ವಾಷಿಂಗ್ ಮಿಷನ್’ಗೆ ಹಾಕಿದ್ದರು. ಹೀಗಾಗಿ ಬೇರೆ ನಿರ್ಧಾರ ಮಾಡಿದ್ದು, ಯಾವ ಸಂದರ್ಭದಲ್ಲಿ ಯಾವುದು ಸರಿ ಎನಿಸುತ್ತದೆ ಎಂಬುದನ್ನು ನಿರ್ಧರಿಸುವ ಸಂಪೂರ್ಣ ಅಧಿಕಾರ ತನಗಿದೆ’ ಎಂದು ಸಹ ಶಿವರಾಮ ಹೆಬ್ಬಾರ್ ಅವರು ಹೇಳಿದ್ದಾರೆ.
ನಗರದಲ್ಲಿ ನಡೆದ ಕಾಂಗ್ರೆಸ್ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಕೇಂದ್ರ ಚುನಾವಣಾ ಆಯೋಗದ ಕಾರ್ಯವೈಖರಿ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. `ಚುನಾವಣಾ ಆಯೋಗದ ಪ್ರಕ್ರಿಯೆಗಳು ಪ್ರಜಾಪ್ರಭುತ್ವಕ್ಕೆ ದೊಡ್ಡ ಮಟ್ಟದ ಧಕ್ಕೆ ತರುತ್ತಿವೆ. ಆಯೋಗದ ಅಧಿಕಾರಿಗಳು ಸ್ವತಂತ್ರವಾಗಿ ಸಭೆ ಸೇರಿಲ್ಲ. ಬದಲಿಗೆ ಅವರನ್ನು ಒತ್ತಡದಿಂದ ಕರೆತಂದು ಕೂರಿಸಲಾಗಿದೆ’ ಎಂದರು. ಕೇವಲ ಚುನಾವಣಾ ಆಯೋಗವಷ್ಟೇ ಅಲ್ಲದೆ ಸಿಬಿಐ ಹಾಗೂ ಇಡಿ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡು ಕಾಂಗ್ರೆಸ್ ನಾಯಕರ ಮೇಲೆ ನಿರಂತರ ದಬ್ಬಾಳಿಕೆ, ಶೋಷಣೆ ಮತ್ತು ದಾಳಿಗಳನ್ನು ನಡೆಸಲಾಗುತ್ತಿದೆ’ ಎಂದು ದೂರಿದರು.
`ಸತೀಶ್ ಶೈಲ್, ಸತೀಶ್ ಜಾರಕಿಹೊಳಿ ಸೇರಿದಂತೆ ರಾಜ್ಯದ ಮುಖ್ಯಮಂತ್ರಿ, ಸಚಿವರು ಹಾಗೂ ಪ್ರಮುಖ ಶಾಸಕರ ಮೇಲೂ ಇಂತಹ ಕ್ರಮಗಳು ನಡೆಯುತ್ತಿವೆ ಎಂದು ಅವರು ಕಳವಳ ವ್ಯಕ್ತಪಡಿಸಿದರು. `ಮುಖ್ಯ ಚುನಾವಣಾ ಆಯುಕ್ತರ ನೇಮಕಾತಿ ಪ್ರಕ್ರಿಯೆಯಲ್ಲಿ ಮುಖ್ಯ ನ್ಯಾಯಮೂರ್ತಿಯನ್ನು ಹೊರಗಿಟ್ಟು ಸಚಿವ ಸಂಪುಟದ ಸಹೋದ್ಯೋಗಿಯನ್ನು ಒಳಗೊಂಡ ವ್ಯವಸ್ಥೆ ರೂಪಿಸಿರುವುದನ್ನು ವಿರೋಧ ಪಕ್ಷಗಳು ಎಂದಿಗೂ ಒಪ್ಪಿಕೊಳ್ಳುವುದಿಲ್ಲ’ ಎಂದರು. `ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಪುನಃಸ್ಥಾಪಿಸುವುದೇ ತಮ್ಮ ಪ್ರಮುಖ ಹೋರಾಟದ ಮೂಲ ಉದ್ದೇಶವಾಗಿದೆ’ ಎಂದರು.