ಕಡಿಮೆ ಸಂಬಳಕ್ಕೆ ಕಾರ್ಮಿಕರು ಸಿಕ್ಕ ಖುಷಿಗೆ ಮಧ್ಯಪ್ರದೇಶದವರನ್ನು ಕೆಲಸಕ್ಕೆ ತೆಗೆದುಕೊಂಡ ಕಾರವಾರದ ನಾಮದೇವ ಮೇಥಾ ಅವರಿಗೆ ಮೂರು ನಾಮ ಬಿದ್ದಿದೆ. ಅವರ ಬಳಿ ಕೆಲಸಕ್ಕಿದ್ದ ಜನರೇ ಅಲ್ಲಿದ್ದ ಸಾಮಗ್ರಿ ಕದ್ದು ಪರಾರಿಯಾಗಿದ್ದಾರೆ!
ಕಾರವಾರದ ಮಾಜಾಳಿ ಬಳಿಯ ನೆಚಕನ್ ಭಾಗ್ ಎಂಬಲ್ಲಿ ನಾಮದೇವ ಮುಕುಂಡ ಮೇಥಾ ಅವರು ವಾಸವಾಗಿದ್ದಾರೆ. ೪೫ ವರ್ಷದ ಅವರು ವಿವಿಧ ವ್ಯವಹಾರ ಮಾಡಿಕೊಂಡಿದ್ದು, ಮುಖ್ಯವಾಗಿ ಕಲ್ಲಿನ ಕ್ರಶರ್ ನಡೆಸುತ್ತಿದ್ದಾರೆ. ಕಡಿಮೆ ಸಂಬಳಕ್ಕೆ ದಿನವಿಡೀ ದುಡಿಯುವವರು ಸಿಕ್ಕ ಕಾರಣ ಅವರು ಮಧ್ಯಪ್ರದೇಶದಿಂದ ಕೆಲಸ ಅರೆಸಿ ಬಂದಿದ್ದ ಸವಾನ್ ಗಂಗ್ವಾಲ್ ಹಾಗೂ ಸೋಹನ್ ತತ್ಸೆ ಅವರನ್ನು ಕೆಲಸಕ್ಕೆ ನೇಮಿಸಿಕೊಂಡಿದ್ದಾರೆ. ಇನ್ನೂ ೨೮-೩೦ ವರ್ಷದ ಅವರಿಬ್ಬರು ಕೆಲ ಕಾಲ ಪ್ರಾಮಾಣಿಕವಾಗಿ ದುಡಿದಿದ್ದು, ಅದಾದ ನಂತರ ಕ್ವಾರಿಯಲ್ಲಿದ್ದ ಬೈಕು ಹಾಗೂ ಇನ್ನಿತರ ಸಾಮಗ್ರಿ ಕದ್ದು ಪರಾರಿಯಾಗಿದ್ದಾರೆ. ಅವರಿಬ್ಬರು ತಮ್ಮ ಫೋನ್ ಸಹ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ.
ಏಪ್ರಿಲ್ ೧೮ಕ್ಕೆ ಈ ಕಳ್ಳತನ ನಡೆದಿದೆ. ಅಣ್ಣ ಸಂತೋಷ ಮೇಥಾ ಅವರ ಹೆಸರಿನಲ್ಲಿದ್ದ ಬೈಕು ಹಾಗೂ ಕ್ರಶರಿನಲ್ಲಿದ್ದ ಕಬ್ಬಿಣ ಕದ್ದವರು ಮರಳಿ ಬರಬಹುದು ಎಂದು ನಾಮದೇವ ಮೇಥಾ ಅವರು ಇಷ್ಟು ದಿನ ಕಾದಿದ್ದಾರೆ. ಆದರೆ, ಈವರೆಗೂ ಬಾರದ ಕಾರಣ ಅವರಿಬ್ಬರ ವಿರುದ್ಧ ಪೊಲೀಸ್ ದೂರು ನೀಡಿದ್ದಾರೆ. ಓಡಿ ಹೋದ ಅವರಿಬ್ಬರನ್ನು ಹುಡುಕಿ ತಮ್ಮ ಸಾಮಗ್ರಿ ಮರಳಿಸಿ ಎಂದು ನಾಮದೇವ ಮೇಥಾ ಅವರು ಪ್ರಕರಣ ದಾಖಲಿಸಿದ್ದು, ಚಿತ್ತಾಕುಲ ಪೊಲೀಸರು ಕಳ್ಳ ಕಾರ್ಮಿಕರಿಬ್ಬರ ಹುಡುಕಾಟ ನಡೆಸಿದ್ದಾರೆ.