ಕಿರವತ್ತಿಯಲ್ಲಿ ಮೀನು ವ್ಯಾಪಾರ ಮಾಡುವ ಸುಭಾನಿ ಪೀರಾ ಅವರಿಗೆ ಅದೇ ಊರಿನ ಅಸ್ಪಕ್ ಬೇವಿನಮರ ಹಾಗೂ ಸುಭಾನಿ ಬೇವಿನಮರ ಸೇರಿ ಹೊಡೆದಿದ್ದಾರೆ. ಹೊಡೆದಾಟ ಮುಗಿದ ನಂತರ `ಸುಭಾನಿ ಅವರದ್ದು ಏನೂ ತಪ್ಪಿಲ್ಲ’ ಎಂದು ಗೊತ್ತಾಗಿದೆ!
ಕಿರವತ್ತಿಯ ಇಂದಿರಾನಗರದಲ್ಲಿ ಸುಭಾನಿ ಹುಸೇನ್ ಸಾಬ್ ಪೀರಾ ಅವರು ವಾಸವಾಗಿದ್ದಾರೆ. ಮೀನು ವ್ಯಾಪಾರ ಮಾಡಿಕೊಂಡು ಅವರು ಜೀವನ ನಡೆಸುತ್ತಿದ್ದಾರೆ. ಅದೇ ಊರಿನಲ್ಲಿ ಆಸ್ಪಕ್ ಭಾಷಾಸಾಬ್ ಬೇವಿನಮರ ಹಾಗೂ ಸುಭಾನಿ ಭಾಷಾಸಾಬ್ ಬೇವಿನಮರ ಅವರು ವಾಸವಾಗಿದ್ದಾರೆ. ಈ ಎಲ್ಲರೂ ಸಂಬoಧಿಕರೇ ಆಗಿದ್ದಾರೆ.
ಹೀಗಿರುವಾಗ, ಮೀನು ವ್ಯಾಪಾರ ಮಾಡುವ ಸುಭಾನಿ ಪೀರಾ ಅವರು ತಮ್ಮ ಸಹೋದರಿಗೆ ಅನಗತ್ಯ ಸಮಸ್ಯೆ ಮಾಡುತ್ತಿರುವ ಬಗ್ಗೆ ಅಸ್ಪಕ್ ಬೇವಿನಮರ ಹಾಗೂ ಸುಭಾನಿ ಬೇವಿನಮರ ಅವರಿಗೆ ವಿಷಯ ಗೊತ್ತಾಗಿದೆ. ಇದನ್ನು ಸಹಿಸದ ಅಸ್ಪಕ್ ಬೇವಿನಮರ ಹಾಗೂ ಸುಭಾನಿ ಬೇವಿನಮರ ಸೇರಿ ಸೆಪ್ಟೆಂಬರ್ 26ರಂದು ರಾತ್ರಿ ಸುಭಾನಿ ಪೀರಾ ಅವರ ಮನೆಗೆ ನುಗ್ಗಿದ್ದಾರೆ. ಸುಭಾನಿ ಪೀರಾ ಅವರಿಗೆ ಮಾತನಾಡಲು ಸಹ ಅವಕಾಶ ಕೊಡದೇ ಹಿಗ್ಗಾಮುಗ್ಗ ಥಳಿಸಿದ್ದಾರೆ.
ಆದರೆ, ಸುಭಾನಿ ಪಿರಾ ಅವರು ಅವರ ಅಕ್ಕನಿಗೆ ಯಾವುದೇ ತೊಂದರೆ ಮಾಡಿಲ್ಲ. ತೊಂದರೆ ಮಾಡಿದ ಎಂಬ ವದಂತಿ ಕೇಳಿ ಸಿಟ್ಟಾದ ಅಸ್ಪಕ್ ಬೇವಿನಮರ ಹಾಗೂ ಸುಭಾನಿ ಬೇವಿನಮರ ಅವರು ಸುಭಾನಿ ಪಿರಾ ಅವರಿಗೆ ಹೊಡೆದಿದ್ದಾರೆ. ಬೈಕ್ ಚಾವಿಯನ್ನು ತಲೆಗೆ ಚುಚ್ಚಿ ನೋವು ಮಾಡಿದ್ದಾರೆ. ಆ ವೇಳೆ ಸುಭಾನಿ ಪಿರಾ ಅವರ ಅಣ್ಣ ಹಾಗೂ ಅಣ್ಣನ ಹೆಂಡತಿ ಸೇರಿ ಹೊಡೆದಾಟ ಬಿಡಿಸಿದ್ದಾರೆ. ಅದಾದ ನಂತರ ಆಸ್ಪಕ್ ಭಾಷಾಸಾಬ್ ಬೇವಿನಮರ ಹಾಗೂ ಸುಭಾನಿ ಭಾಷಾಸಾಬ್ ಬೇವಿನಮರ ಅವರಿಗೆ ಸುಭಾನಿ ಪಿರಾ ಅವರಿಂದ ಅಕ್ಕನಿಗೆ ಯಾವುದೇ ತೊಂದರೆ ಆಗಿಲ್ಲ ಎಂದು ಗೊತ್ತಾಗಿದೆ.
ಅದಾಗಿಯೂ, ಅನಗತ್ಯ ದಾಳಿ ಮಾಡಿದವರ ವಿರುದ್ಧ ಸುಭಾನಿ ಪಿರಾ ಅವರು ಪೊಲೀಸ್ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿದ್ದು, ತಡರಾತ್ರಿ ಮನೆಗೆ ನುಗ್ಗಿ ಗಲಾಟೆ ಮಾಡಿದ ಆರೋಪಿತರಿಬ್ಬರ ವಿರುದ್ಧ ಕ್ರಮ ಜರುಗಿಸಿದ್ದಾರೆ.