ಡ್ರೀಮ್ ಹೈ ಬ್ಯಾಡ್ಮಿಂಟನ್ ಅಕಾಡೆಮಿಯವರಯ ದಸರಾ ಹಬ್ಬದ ಅಂಗವಾಗಿ ಆಯೋಜಿಸಲಾಗಿದ್ದ ‘ಡ್ರೀಮ್ ಹೈ ಕಪ್ ಸೀಸನ್ – 2’ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ‘ಪವರ್ ಸ್ಮಾಶರ್’ ತಂಡ ಗೆಲುವು ಸಾಧಿಸಿದೆ. ರಾಯಲ್ ಚಾಲೆಂಜರ್ಸ್ ತಂಡವೂ ದ್ವಿತೀಯ ಸ್ಥಾನಪಡೆದಿದೆ.
ಬಹುಮಾನ ವಿತರಣಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಯುವ ಮುಖಂಡ ಪ್ರಶಾಂತ ನಾಯಕ, ‘ಇಂತಹ ಕ್ರೀಡಾ ಪಂದ್ಯಾವಳಿಗಳಿಂದ ಸ್ಥಳೀಯ ಉದಯೋನ್ಮುಖ ಕ್ರೀಡಾಪಟುಗಳಿಗೆ ಉನ್ನತ ಮಟ್ಟದ ವೇದಿಕೆ ಸಿಗಲು ಸಾಧ್ಯವಾಗುತ್ತದೆ. ದಸರಾ ಹಬ್ಬದ ಈ ಸುಸಂದರ್ಭದಲ್ಲಿ ಇಂತಹ ಅದ್ಭುತ ಪಂದ್ಯಾವಳಿ ಆಯೋಜಿಸಿ ತಾಲೂಕಿನಲ್ಲಿ ಬ್ಯಾಡ್ಮಿಂಟನ್ ಹಬ್ಬದ ವಾತಾವರಣ ನಿರ್ಮಿಸಿದ ಆಯೋಜಕರ ಕಾರ್ಯ ಶ್ಲಾಘನೀಯ. ಇಲ್ಲಿ ಆಟವಾಡಿದ ಎಲ್ಲಾ ಕ್ರೀಡಾಪಟುಗಳಿಗೂ ಭವಿಷ್ಯದಲ್ಲಿ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಆಡುವಂತಹ ಭಾಗ್ಯ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ’ ಎಂದರು.
ಈ ಪಂದ್ಯಾವಳಿಯ ಮುಖ್ಯ ಆಯೋಜಕರಾಗಿ ವಿಶಾಲ ನಾಯಕ ಹಾಗೂ ಸಾಗರ್ ನಾಯಕ ನೇತೃತ್ವ ವಹಿಸಿ ಪಂದ್ಯಾವಳಿಯನ್ನು ಯಶಸ್ವಿಗೊಳಿಸಿದರು. ಸಮಾರಂಭದಲ್ಲಿ ಪ್ರಮುಖ ಉದ್ಯಮಿಗಳಾದ ಶ್ಯಾಮ ಶೇಟ್, ಮಹಾಂತೇಶ ನಾಯಕ ಹಿರೇಗುತ್ತಿ, ಮಂಜುನಾಥ್ ನಾಯಕ ಹಿಲ್ಲೂರು ಹಾಗೂ ಹಿರಿಯರಾದ ಜಿ. ಎಲ್. ನಾಯಕ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದು, ವಿಜೇತ ಕ್ರೀಡಾಪಟುಗಳಿಗೆ ಪಾರಿತೋಷಕ ವಿತರಿಸಿ ಗೌರವಿಸಿದರು.