ಹಳವಳ್ಳಿ-ಕನಕನಳ್ಳಿ ಭಾಗದಲ್ಲಿದ್ದ ಹಲವು ಮರಗಳಿಗೆ ವಿಷ ಪ್ರಾಶನ ನಡೆದಿದೆ. ಈಗಾಗಲೇ ಇಲ್ಲಿ 10ಕ್ಕೂ ಅಧಿಕ ದೊಡ್ಡ ದೊಡ್ಡ ಮರಗಳಿಗೆ ವಿಷ ಉಣಿಸಿ ಕೊಲ್ಲಲಾಗಿದ್ದು, ಇನ್ನಷ್ಟು ಮರಗಳಿಗೆ ಕೊಡಲಿಯಿಂದ ಚುಚ್ಚಿ ವಿಷ ಹಾಕಲಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಅಭಿವೃದ್ಧಿ ಹೆಸರಿನಲ್ಲಿ ಒಂದಡೆ ಕಾಡು ನಾಶವಾಗುತ್ತಿದೆ. ಇನ್ನೊಂದು ಕಡೆ ಮಾನವನ ವಿಕೃತಿಯ ಕಾರಣ ಮರ ಕಡಿಮೆಯಾಗುತ್ತಿದೆ. ತಮ್ಮ ಪಾಡಿಗೆ ತಾವು ಸ್ವಚ್ಛಂದವಾಗಿ ಹಬ್ಬಿರುವ ಗಿಡ-ಮರಗಳನ್ನು ಅನಗತ್ಯವಾಗಿ ಕಡಿಯುವವರ ಸಂಖ್ಯೆ ಹೆಚ್ಚಾಗಿದೆ. `ಉತ್ತರ ಕನ್ನಡ ಉಳಿಸಿ’ ಎಂದು ಪರಿಸರವಾದಿಗಳ ಜೊತೆ ರೈತರು ದೊಡ್ಡ ಪ್ರಮಾಣದಲ್ಲಿ ಹೋರಾಟ ನಡೆಸುತ್ತಿದ್ದು, ಈ ರೈತರ ಹೆಸರು ಹಾಳು ಮಾಡುವುದಕ್ಕಾಗಿಯೇ ಕೆಲವರು ಕಾಡು ಕಡಿಯುವ ಕೆಲಸ ಮಾಡುತ್ತಿದ್ದಾರೆ. ಅಂಥವರ ಬಗ್ಗೆ ಅರಿವಿದ್ದರೂ ಅರಣ್ಯ ಇಲಾಖೆ ಅಧಿಕಾರಿಗಳು ಕಾಟಾಚಾರಕ್ಕೆ ಕೇಸು ದಾಖಲಿಸಿ ಮೌನವಾಗಿದ್ದಾರೆ.
ಕಳೆದ ಎರಡು ವಾರದಿಂದ ಹಳವಳ್ಳಿ-ಕನಕನಳ್ಳಿ ಭಾಗದಲ್ಲಿದ್ದ ಅನೇಕ ಮರಗಳು ಸಾವನಪ್ಪುತ್ತಿವೆ. ಪ್ರತಿ ದಿನ ಒಂದೊoದು ಮರಗಳು ಒಣಗುತ್ತಿವೆ. ಮರಕ್ಕೆ ಕೊಡಲಿಯ ಏಟು ಹಾಕಿ ಅಲ್ಲಿ ವಿಷ ಉಣಿಸಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಈ ಬಗ್ಗೆ ಅರಣ್ಯ ಇಲಾಖೆಗೂ ದೂರು ಸಲ್ಲಿಕೆಯಾಗಿದೆ. ಆದರೆ, ಅಧಿಕಾರಿಗಳು ಮಾತ್ರ ಸಾಕ್ಷಿ ನಾಶಕ್ಕಾಗಿ ಮರಕ್ಕೆ ಮಣ್ಣು ಮೆತ್ತಿದ್ದಾರೆ. ಅದಾಗಿಯೂ, ವಿಷ ಉಂಡ ಹಲವು ಮರಗಳು ಅಲ್ಲಿಯೇ ಒಣಗಿವೆ. ಇನ್ನಷ್ಟು ಮರಗಳಿಗೆ ಅವರು ವಿಷ ಉಣಿಸುವ ಕೆಲಸ ಮುಂದುವರೆಸಿದ್ದು, ವಿಕೃತಿ ಮೆರೆದವರ ಬಗ್ಗೆ ಅರಿವಿದ್ದರೂ ಅದನ್ನು ಪ್ರಶ್ನಿಸಿದವರಿಲ್ಲ. ರಾಜಕೀಯ ಪ್ರಭಾವದ ಜೊತೆ ಕುರುಡು ಕಾಂಚಾಣ ಸಹ ಇಲ್ಲಿ ಕೆಲಸ ಮಾಡಿದ ಅನುಮಾನವ್ಯಕ್ತವಾಗಿದೆ.
ದೊಡ್ಡ ಮರಗಳನ್ನು ಸುತ್ತಲು ಕಡಿದು ನಡುವೆ ವಿಷ ಹಾಕಿದ ಕುರುಹು ಈಗಲೂ ಅಲ್ಲಿ ಕಾಣುತ್ತಿದೆ. ಅನೇಕ ಮರಗಳು ವಿಷ ಉಂಡು ಒಣಗಿದ ಸಾಕ್ಷಿಗಳಿವೆ. ಅಂಕೋಲಾ ಹಳವಳ್ಳಿ-ಕನಕನಳ್ಳಿಯಲ್ಲಿ ಮರಗಳ ಮಾರಣ ಹೋಮ ನಡೆಯುತ್ತಿರುವುದು ಅರಣ್ಯ ಇಲಾಖೆಗೆ ಗೊತ್ತೇ ಇಲ್ಲ ಎಂದಲ್ಲ. ಈಗಾಗಲೇ ಅರಣ್ಯ ಇಲಾಖೆಗೆ ಈ ಬಗ್ಗೆ ದೂರು ಸಲ್ಲಿಕೆಯಾದರೂ ಅವರು ಕ್ರಮ ಜರುಗಿಸಿಲ್ಲ. ಮರಕ್ಕೆ ಉಣಿಸಿದ ವಿಷಕಾರಿ ಪದಾರ್ಥ ಯಾವುದು? ಆ ರಾಸಾಯನಿಕ ಬಳಸಿದ್ದರಿಂದ ಪರಿಸರದ ಮೇಲಾಗುವ ದುಷ್ಪರಿಣಾಮವೇನು? ಎನ್ನುವುದರ ಬಗ್ಗೆಯೂ ಅಧಿಕಾರಿಗಳು ತಲೆ ಕೆಡಿಸಿಕೊಂಡಿಲ್ಲ. ದೂರು ಸ್ವೀಕರಿಸಿದ ನಂತರವೂ ಸ್ಥಳ ಪರಿಶೀಲನೆ ಮಾಡಿ, ಬುದ್ದಿಮಾತು ಹೇಳಿಲ್ಲ.