ಕಲ್ಲೇಶ್ವರದ ಲಕ್ಷಣ ಸಿದ್ದಿ ಅವರ ತೋಟಕ್ಕೆ ಕಡವೆ ಬಂದಿದ್ದು, ಅದನ್ನು ಹಿಡಿದು ಕತ್ತಿಯಿಂದ ಕೊಚ್ಚಿದವರ ಮೇಲೆ ಅರಣ್ಯಾಧಿಕಾರಿಗಳು ದಾಳಿ ಮಾಡಿದ್ದಾರೆ. ಖಾಕಿ ಬಟ್ಟೆಧರಿಸಿ ಬಂದವರನ್ನು ನೋಡಿದ ಐದು ಜನ ಓಡಿ ಪರಾರಿಯಾಗಿದ್ದು, ನಾರಾಯಣ ಸಿದ್ದಿ ಅವರು ಓಡಲಾಗದೇ ಸಿಕ್ಕಿ ಬಿದ್ದಿದ್ದಾರೆ. ಜೈಲು ಸೇರುವ ಮುನ್ನವೇ ನಾರಾಯಣ ಸಿದ್ದಿ ಅವರು ಓಡಿ ಹೋದ ಐದು ಜನರ ಹೆಸರು ಬಾಯ್ಬಿಟ್ಟಿದ್ದಾರೆ!
ಅಂಕೋಲಾದ ಕಲ್ಲೇಶ್ವರ ಹಾಗೂ ಸುತ್ತಲಿನ ಪ್ರದೇಶದಲ್ಲಿ ಕೆಲ ದಿನಗಳಿಂದ ಕಡವೆಯೊಂದು ಓಡಾಟ ನಡೆಸಿತ್ತು. ಆ ಕಡವೆ ಮಾಂಸಕ್ಕೆ ಆಸೆಪಟ್ಟ ಕೆಲವರು ಅದಕ್ಕೆ ಗುರಿ ಹಾಕಿಕೊಂಡಿದ್ದರು. ಅಕ್ಟೊಬರ್ 16ರಂದು ಆ ಕಡವೆ ಕಲ್ಲೇಶ್ವರದ ಲಕ್ಷಣ ಬಾಬು ಸಿದ್ದಿ ಅವರ ಅಡಿಕೆ ತೋಟಕ್ಕೆ ಬಂದಿದ್ದು, ಕನಕನಳ್ಳಿಯ ಗಣೇಶ ರಾಮು ರಾಥೋಡ್, ಚೆನ್ನಮನೆಯ ಲೋಕೇಶ ನಾರಾಯಣ ಸಿದ್ದಿ, ಶಿವರಾಜ ಲಕ್ಷಣ ಸಿದ್ದಿ, ಕಲ್ಲೇಶ್ವರದ ರಾಜು ಕೃಷ್ಣ ಸಿದ್ದಿ ಸೇರಿ ಅದನ್ನು ಕೊಂದರು. ಲಕ್ಷಣ ಸಿದ್ದಿ ಅವರ ಜೊತೆ ನಾರಾಯಣ ಗುರಕ್ಯಾ ಸಿದ್ದಿ ಅವರು ಆಗಮಿಸಿ ಮಾಂಸ ಬೇರೆ ಮಾಡಿದರು. ಚರ್ಮವನ್ನು ಬೇರೆಡೆ ಕೊಂಡೊಯ್ಯುವ ಪ್ರಯತ್ನ ನಡೆಸಿದ್ದರು.
ಈ ವಿಷಯ ಅರಿತ ರಾಮನಗುಳಿ ವಲಯ ಅರಣ್ಯಾಧಿಕಾರಿ ದೀಪಕ ನಾಯ್ಕ ಅವರು ತಮ್ಮ ತಂಡದ ಸದಸ್ಯರಾದ ಪ್ರಕಾಶ ಹಟ್ಟಿ, ಅಜಯ್ ಇ ಎಂ, ಸಂತೋಷ ಕರಚಕಟ್ಟಿ, ಸತೀಶ ಮಾರ್ಚಪ್ಪನವರ್, ಅಲ್ಮಿಸ್ ಬೀಜಾಪುರ, ಪ್ರಭುದೇವ ಮಣಕವಾಡ, ಸೋಮನಾಥ ಕಂಬಾರ್ ಅವರ ಜೊತೆ ಅಲ್ಲಿ ದಾಳಿ ಮಾಡಿದರು. ದಾಳಿಯ ವಿಷಯವೂ ಕಡವೆ ಭೇಟೆಗಾರರಿಗೆ ಗೊತ್ತಾಗಿದ್ದು, ತೋಟದಲ್ಲಿದ್ದ ಗಣೇಶ ರಾಥೋಡ್, ಲೋಕೇಶ ಸಿದ್ದಿ, ಶಿವರಾಜ ಸಿದ್ದಿ, ರಾಜು ಸಿದಿ ಹಾಗೂ ಲಕ್ಷಣ ಸಿದ್ದಿ ಅಲ್ಲಿಂದ ಪರಾರಿಯಾದರು. ಕಡವೆ ಮಾಂಸದ ಆಸೆಯಿಂದ ಅಲ್ಲಿಯೇ ಕಾಯುತ್ತ ಕುಳಿತಿದ್ದ ನಾರಾಯಣ ಸಿದ್ದಿ ಅವರು ಅಧಿಕಾರಿಗಳ ಬಳಿ ಸಿಕ್ಕಿಬಿದ್ದರು.
ಕಾಡು ಪ್ರಾಣಿ ಮಾಂಸದ ಜೊತೆ ಕತ್ತಿ, ಚಾಕು, ಬ್ಯಾಟರಿ ಜೊತೆ ಎರಡು ಬೈಕುಗಳನ್ನು ಅಧಿಕಾರಿಗಳು ಜಪ್ತು ಮಾಡಿದರು. ನಾರಾಯಣ ಸಿದ್ದಿ ಅವರನ್ನು ಮಾತನಾಡಿಸಿದಾಗ ಉಳಿದ ಸ್ನೇಹಿತರ ಬಗ್ಗೆಯೂ ಅವರು ಬಾಯ್ಬಿಟ್ಟರು. ನಾರಾಯಣ ಸಿದ್ದಿ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಅಧಿಕಾರಿಗಳು ಉಳಿದವರ ವಿರುದ್ಧವೂ ಕೇಸು ಹಾಕಿದರು.