ಸರ್ಕಾರಿ ಉದ್ಯೋಗದಲ್ಲಿರುವ ಮಂಜುನಾಥ ನವೀನಕುಮಾರ ಅವರು ರೈಲಿನ ಮೂಲಕ ಅಂಕೋಲಾ-ಮoಗಳೂರು ಪ್ರಯಾಣಕ್ಕೆ ಉದ್ದೇಶಿಸಿದ್ದು ಇದಕ್ಕಾಗಿ 3 ಲಕ್ಷ ರೂ ಖಾಲಿ ಮಾಡಿಕೊಂಡಿದ್ದಾರೆ. ರೈಲ್ವೆ ಆಪ್ ಮೂಲಕ ಮಾಹಿತಿಪಡೆಯಲು ಹೋದಾಗ ಅವರ ಮೊಬೈಲ್ ಹ್ಯಾಕ್ ಮಾಡಿದ ದುಷ್ಕರ್ಮಿಗಳು ಬ್ಯಾಂಕ್ ಖಾತೆಯ ಹಣ ಖರ್ಚು ಮಾಡಿದ್ದಾರೆ.
ಅಂಕೋಲಾದ ಗಣಪತಿ ಗಲ್ಲಿಯಲ್ಲಿ ಮಂಜುನಾಥ ನವೀನಕುಮಾರ ಅವರು ವಾಸವಾಗಿದ್ದಾರೆ. ರಾಜ್ಯ ಸಕಾರದ ಉದ್ಯೋಗಿಯಾಗಿ ಅವರು ಬದುಕು ಕಟ್ಟಿಕೊಂಡಿದ್ದಾರೆ. ಅವರ ತಾಯಿ ತುಳಸಿ ದುರ್ಗಾನಂದ ನಾಯ್ಕ ಅವರ ಹೆಸರಿನಲ್ಲಿ ಕೆನರಾ ಬ್ಯಾಂಕ್ ಖಾತೆಯಿದ್ದು, ಆ ಬ್ಯಾಂಕ್ ಖಾತೆಯ ಹಣ ಕಡಿತವಾಗಿದೆ. ಮಂಜುನಾಥ ನವೀನಕುಮಾರ ಅವರು ಬಳಸುತ್ತಿದ್ದ ಮೊಬೈಲ್ ಹ್ಯಾಕ್ ಮಾಡಿದ ಕಿಡಿಗೇಡಿಗಳು ಅವರ ತಾಯಿ ಖಾತೆಯಲ್ಲಿದ್ದ ಹಣ ಎಗರಿಸಿದ್ದಾರೆ.
ಅಕ್ಟೊಬರ್ 21ರಂದು ಸಂಜೆ 5 ಗಂಟೆಗೆ ಅಂಕೋಲಾದಿoದ ಮಂಗಳೂರಿಗೆ ಹೋಗುವ ರೈಲಿನ ಸಮಯದ ಬಗ್ಗೆ ಮಂಜುನಾಥ ನವೀನಕುಮಾರ ಅವರು ಹುಡುಕಾಟ ಮಾಡಿದ್ದಾರೆ. ರೈಲ್ವೆ ಆಪ್ ಮೂಲಕ ಅವರು ಸಮಯ ನೋಡುವಾಗ ಅವರಿಗೆ 1 ಲಕ್ಷ ರೂ ಕಡಿತವಾದ ಬಗ್ಗೆ ಮೆಸೆಜ್ ಬಂದಿದೆ. ತಕ್ಷಣ ಅವರು ತಮ್ಮ ಬ್ಯಾಂಕ್ ಖಾತೆ ಪರಿಶೀಲನೆ ಮಾಡಿದ್ದು, ಅದು ಸಾಧ್ಯವಾಗಿಲ್ಲ. ತಮ್ಮ ಬ್ಯಾಂಕ್ ಖಾತೆಯಲ್ಲಿದ್ದ ಹಣ ಬೇರೆ ಖಾತೆಗೆ ವರ್ಗಾಯಿಸುವ ಪ್ರಯತ್ನ ಮಾಡಿದರೂ ಅದು ಆಗಿಲ್ಲ. ಕೊನೆಗೆ ಅವರ ತಾಯಿಯ ಬ್ಯಾಂಕ್ ಖಾತೆಯಲ್ಲಿದ್ದ ಹಣ ಕಡಿತವಾಗಿರುವುದು ಗೊತ್ತಾಗಿದೆ. ಆ ವೇಳೆಗಾಗಲೇ ಮತ್ತೆ ಒಂದು ಲಕ್ಷ ರೂ ಹಣದ ಹಾಗೇ ಎರಡು ಬಾರಿ ತುಳಸಿ ನಾಯ್ಕ ಅವರ ಖಾತೆಯ ಹಣ ಕಡಿತವಾಗಿದೆ.
ತಕ್ಷಣ ಮಂಜುನಾಥ ನವೀನಕುಮಾರ ಅವರು 1930ಗೆ ಫೋನ್ ಮಾಡಿದ್ದಾರೆ. ತಮಗಾದ ಮೋಸದ ಬಗ್ಗೆ ಅವರು ವಿವರಿಸಿದ್ದಾರೆ. ತಲಾ 1 ಲಕ್ಷ ರೂಪಾಯಿಯಂತೆ ಒಟ್ಟು ಮೂರು ಬಾರಿ ಹಣ ಕಡಿತವಾದ ಬಗ್ಗೆ ಅವರು ಸೈಬರ್ ಅಪರಾಧ ಪೊಲೀಸ್ ಠಾಣೆಗೂ ಮಾಹಿತಿ ನೀಡಿದ್ದು, ಕೇಸು ದಾಖಲಿಸಿದ್ದಾರೆ.