ಮಾದಕ ವಸ್ತು ಮಾರಾಟ ಮಾಡಿ ಹಣ ಮಾಡಲು ಹೋಗಿದ್ದ ಮೊಹಮದ್ ಸಾಯಿಮ್ ಅವರು ಯುವ ಜನರಿಗೆ ಗಾಂಜಾ ಪೂರೈಸಿ ಅವರ ಜೀವನ ಹಾಳು ಮಾಡುತ್ತಿದ್ದು, ಪೊಲೀಸರು ಅದಕ್ಕೆ ಕಡಿವಾಣ ಹಾಕಿದ್ದಾರೆ. ಮೊಹಮದ್ ಸಾಯಿಮ್ ಅವರ ಬಳಿಯಿದ್ದ 816 ಗ್ರಾಂ ಗಾಂಜಾವನ್ನು ಪೊಲೀಸರು ಜಪ್ತು ಮಾಡಿದ್ದಾರೆ.
ಭಟ್ಕಳದ ಮೂಸಾನಗರ ಬೆಂಡೆಖಾನ್ ಬಳಿ ಮೊಹಮ್ಮದ್ ಸಾಯಿಮ್ ಮೊಹಮ್ಮದ್ ಸಲೀಂ ಖಾಜಿಯಾ ಅವರು ವಾಸವಾಗಿದ್ದಾರೆ. 31 ವರ್ಷದ ಅವರು ದುಡಿದು ಹಣ ಮಾಡುವ ಬದಲು ಕಾನೂನುಬಾಹಿರ ಚಟುವಟಿಕೆ ಮೂಲಕ ದುಡ್ಡು ಮಾಡುವ ಕನಸು ಕಂಡಿದ್ದಾರೆ. ಅದಕ್ಕಾಗಿ ಗಾಂಜಾ ಮಾರಾಟ ಮಾಡಿ ಬದುಕು ಕಟ್ಟಿಕೊಳ್ಳಲು ನಿರ್ಧರಿಸಿದ್ದಾರೆ. ಸ್ಕೂಟಿಯಲ್ಲಿ ಗಾಂಜಾ ಸಾಗಿಸುವಾಗಲೇ ಅವರು ಸಿಕ್ಕಿಬಿದ್ದಿದ್ದಾರೆ.
ಅಕ್ಟೊಬರ್ 2ರಂದು ಸಂಜೆ 6.30ರ ಸುಮಾರಿಗೆ ಭಟ್ಕಳ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಹೆಬಳೆ ಗ್ರಾಮದ ಪಿರ್ದೋಸ ನಗರದ ಕೋಳಿ ಫಾರ್ಮ್ ಸಮೀಪ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದವರಿಗೆ ಮೊಹಮ್ಮದ್ ಸಾಯಿಮ್ ಅವರು ಸಿಕ್ಕಿಬಿದ್ದಿದ್ದಾರೆ. 81 ಸಾವಿರ ರೂ ಮೌಲ್ಯದ ಗಾಂಜಾ ಜೊತೆ ಅವರು ಸಿಕ್ಕಿ ಬಿದ್ದಿದ್ದಾರೆ. ಸ್ಕೂಟಿಯನ್ನು ಸಹ ಪೊಲೀಸರು ಜಪ್ತು ಮಾಡಿದ್ದಾರೆ.
ಪೊಲೀಸ್ ಅಧೀಕ್ಷಕ ದೀಪನ್ ಎಂ ಎನ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಜಿ, ಹಾಗೂ ಭಟ್ಕಳ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕ ರಾನು ಗುಪ್ತಾ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆದಿದೆ. ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ ಪೊಲೀಸ್ ನಿರೀಕ್ಷಕ ವೆಂಕಟೇಶ್ ಮೂರ್ನಾಳ ನೇತೃತ್ವದಲ್ಲಿ ಪಿಎಸ್ಐ ಮಲ್ಲಿಕಾರ್ಜುನ್ ಕೊರಾಣಿ ಹಾಗೂ ಭರ್ಮಪ್ಪ ಬೆಳಗಲಿ ಸೇರಿದಂತೆ ಪೊಲೀಸ್ ಸಿಬ್ಬಂದಿ ಮಂಜುನಾಥ ಗೊಂಡ, ಮಂಜುನಾಥ ಖಾರ್ವಿ, ಈರಣ್ಣ ಪೂಜಾರಿ, ಬಾಗಪ್ಪ ಕಡಕಲ್, ನಿಂಗನಗೌಡ ಪಾಟೀಲ್, ಅಂಬರೀಷ್ ಕುಂಬಾರಿ, ವಿನಯ ಮಬ್ರರ, ಸಂತೋಷ ಹಡಪದ, ಚಾಲಕ ಸಂತೋಷ ನಾಯ್ಕ ಸೇರಿ ಕಾರ್ಯಾಚರಣೆ ಮಾಡಿದ್ದಾರೆ.