ಕಳೆದ ಎರಡುವರೆ ವರ್ಷದಿಂದ ಕಾರವಾರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾಗಿದ್ದ ಗಿರೀಶ್ ಅವರು ಉಡುಪಿಗೆ ವರ್ಗವಾಗಿದ್ದಾರೆ. ಕರಾವಳಿ ಕಾವಲು ಪೊಲೀಸ್ ವಿಭಾಗಕ್ಕೆ ಅವರನ್ನು ವರ್ಗಾವಣೆ ಮಾಡಲಾಗಿದೆ. ಜನಸ್ನೇಹಿಯಾಗಿ ಕರ್ತವ್ಯ ನಿಭಾಯಿಸಿದ ಗಿರೀಶ್ ಅವರ ಸೇವೆ ಸ್ಮರಿಸಿ ಜನಶಕ್ತಿ ವೇದಿಕೆಯವರು ಗೌರವಿಸಿದ್ದಾರೆ.
ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವ ನಾಯಕ ಅವರು ತಮ್ಮ ಸಂಘಟನೆ ಸದಸ್ಯರ ಜೊತೆ ಡಿವೈಎಸ್ಪಿ ಕಚೇರಿಗೆ ಭೇಟಿ ನೀಡಿದ್ದಾರೆ. ಗಿರೀಶ ಅವರ ಸೇವೆಯ ಬಗ್ಗೆ ಮಾತನಾಡಿದ ಅವರು ತಿರಂಗಾ ಪೇಟಾ ತೊಡಿಸಿ ಗೌರವಿಸಿದ್ದಾರೆ. ನಂತರ ಶಾಲು-ಹಾರ ಹಾಕಿದರಲ್ಲದೇ, ಪುಸ್ತಕವನ್ನು ಉಡುಗರೆಯಾಗಿ ನೀಡಿದ್ದಾರೆ. ಗಿರೀಶ ಅವರ ಕರ್ತವ್ಯ ನಿಷ್ಠೆ, ಜನಸ್ನೇಹಿ ನಡೆ ಹಾಗೂ ಪ್ರಕರಣಗಳನ್ನು ಚಾಕಚಕ್ಯತೆಯಿಂದ ನಿಭಾಯಿಸಿದ ಕಾರ್ಯವೈಖರಿಯನ್ನು ಜನಶಕ್ತಿ ವೇದಿಕೆಯವರು ಶ್ಲಾಘಿಸಿದ್ದಾರೆ.
ಡಿವೈಎಸ್ಪಿ ಗಿರೀಶ್ ಅವರು ಈ ಹಿಂದೆ ಕೂಡ ಕಾರವಾರದಲ್ಲಿ ಸೇವೆ ಸಲ್ಲಿಸಿರುವ ಅನುಭವ ಹೊಂದಿದ್ದಾರೆ. 2016-18ರ ಅವಧಿಯಲ್ಲಿಯೂ ಕಾರವಾರದಲ್ಲಿ ಕರ್ತವ್ಯ ನಿರ್ವಹಿಸಿದ್ದ ಅವರು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ಯಲ್ಲಿಯೂ ಡಿವೈಎಸ್ಪಿಯಾಗಿ ಕಾರ್ಯನಿರ್ವಹಿಸಿದ್ದರು. ನಂತರ ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ಪೊಲೀಸ್ ಉಪಾದೀಕ್ಷಕರಾಗಿ ಸೇವೆ ಸಲ್ಲಿಸಿ ಮತ್ತೆ ಕಾರವಾರ ಉಪವಿಭಾಗಕ್ಕೆ ಆಗಮಿಸಿದ್ದರು. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಹಾಗೂ ವಿವಿಧ ಪ್ರಕರಣಗಳನ್ನು ಪರಿಣಾಮಕಾರಿಯಾಗಿ ನಿಭಾಯಿಸುವಲ್ಲಿ ಅವರು ಮಹತ್ವದ ಕೆಲಸ ಮಾಡಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ ಕಾರವಾರ ತಾಲೂಕು ಅಧ್ಯಕ್ಷ ರಾಮಾ ನಾಯ್ಕ, ಜನಶಕ್ತಿ ವೇದಿಕೆಯ ಪದಾಧಿಕಾರಿ ಬಾಬು ಶೇಖ್, ಸುರೇಶ್ ನಾಯ್ಕ, ಸಿ ಎನ್ ನಾಯ್ಕ, ರಾಜೇಶ್ ಬಾಡ್ಕರ್, ರತ್ನಾಕರ್ ಬಾಡ್ಕರ್, ಶಿವಾನಂದ ನಾಯ್ಕ ಅವರು ಗಿರೀಶ ಅವರನ್ನು ಗೌರವಿಸಿದರು.