ಡಾಕ್ಟರ್ ಆಗಬೇಕು ಎಂದು ಕನಸು ಕಂಡಿದ್ದ ಯುವತಿಗೆ ಶೈಲೇಶಕುಮಾರ ಎಂಬಾತರು MBBS ಸೀಟು ಕೊಡಿಸುವುದಾಗಿ ನಂಬಿಸಿ ಹಣಪಡೆದಿದ್ದಾರೆ. 23.50 ಲಕ್ಷ ರೂ ಕೊಟ್ಟರೂ ಶೈಲೇಶಕುಮಾರ ಅವರಿಂದ ಸೀಟು ಕೊಡಿಸಲು ಆಗಿಲ್ಲ. ಕೊಟ್ಟ ಹಣವನ್ನು ಸಹ ಶೈಲೇಶಕುಮಾರ ಮರಳಿ ಕೊಟ್ಟಿಲ್ಲ.
ಭಟ್ಕಳದ ಮುಟ್ಟಳ್ಳಿ ನೀರಸತ್ತಮನೆಯಲ್ಲಿ ರಾಜು ರಾಮಾ ನಾಯ್ಕ ಅವರು ವಾಸವಾಗಿದ್ದಾರೆ. ಸರ್ಕಾರಿ ಶಾಲೆಯ ಶಿಕ್ಷಕರಾಗಿದ್ದ ಅವರಿಗೆ ಮಗಳನ್ನು ಡಾಕ್ಟರ್ ಓದಿಸಬೇಕು ಎಂಬ ಕನಸು. ಕಳೆದ ವರ್ಷ ನಿವೃತ್ತರಾಗಿದ್ದ ರಾಜು ನಾಯ್ಕ ಅವರು ತಮ್ಮ ಉಳಿತಾಯದ ಹಣವನ್ನು ಮಗಳ ವೈದ್ಯಕೀಯ ಶಿಕ್ಷಣಕ್ಕೆ ಮೀಸಲಿಟ್ಟಿದ್ದಾರೆ. ಆ ಹಣವೇ ಇದೀಗ ಅನ್ಯರ ಪಾಲಾಗಿದೆ.
ರಾಜು ನಾಯ್ಕ ಅವರು ಫೇಸ್ಬುಕ್ ನೋಡುವಾಗ ಅವರಿಗೆ ಮಣಿಪಾಲ್ ಕಾಲೇಜಿನಲ್ಲಿ ಎಂಬಿಬಿಎಸ್ ಸೀಟುಯಿರುವ ಬಗ್ಗೆ ಗೊತ್ತಾಗಿದೆ. ಆ ಬಗ್ಗೆ ಮಾಹಿತಿ ಅರಿಸಿ ಹೊರಟಾಗ ಅವರಿಗೆ ಅಲ್ಲಿ SAI KRUPA EDUCTION CONSULTANCY ಎಂಬ ಸಂಸ್ಥೆಯ ಪರಿಚಯವಾಗಿದೆ. ಅಲ್ಲಿನ ಶೈಲೇಶಕುಮಾರ ಎಂಬಾತರು `ನಿಮ್ಮ ಮಗಳಿಗೆ ಸರ್ಕಾರಿ ಕೋಟಾದ ಅಡಿ ಸೀಟು ಕೊಡಿಸುವೆ’ ಎಂದು ಹೇಳಿದ್ದಾರೆ. ಇದಕ್ಕಾಗಿ ಅವರು ಹಂತ ಹಂತವಾಗಿ ಹಣಪಡೆದಿದ್ದು, ರಾಜು ನಾಯ್ಕ ಅವರು 23.50 ಲಕ್ಷ ರೂ ವರ್ಗಾಯಿಸಿದ್ದಾರೆ. ಆದರೆ, ಶೈಲೇಶಕುಮಾರ ಅವರು ಹಣಪಡೆದೂ ಸೀಟು ಕೊಡಿಸಿಲ್ಲ. ಹಣವನ್ನು ಸಹ ಮರಳಿ ಕೊಟ್ಟಿಲ್ಲ.
ಮಗಳ ವೈದ್ಯಕೀಯ ಕನಸಿಗಾಗಿ ಲಕ್ಷಾಂತರ ರೂ ವೆಚ್ಚ ಮಾಡಿದ ರಾಜು ನಾಯ್ಕ ಅವರು ಮೋಸ ಹೋಗಿದ್ದಾರೆ. ದುಡ್ಡು ಕೊಟ್ಟು ಸರ್ಕಾರಿ ಸೀಟಿ ಖರೀದಿಸಲು ಮುಂದಾಗಿದ್ದ ಅವರಿಗೆ ಇದೀಗ ಬುದ್ದಿ ಬಂದಿದೆ.