ತೋಟಕ್ಕೆ ಮದ್ದು ಹೊಡೆಯಲು ಹೋಗಿದ್ದ ಬೊಪ್ಪನಳ್ಳಿಯ ದಿವಾಕರ ಹೆಗಡೆ ಅವರಿಗೆ ಗುದ್ದು ಬಿದ್ದಿದೆ. ಅವರ ಸಹೋದರ ಸುಧಾಕರ ಹೆಗಡೆ ಅವರೇ ಹೊಡೆತ ಹಾಕಿದ್ದು, ಈ ಸಹೋದರರ ಕಾಳಗಕ್ಕೆ ಸುಧಾಕರ ಹೆಗಡೆ ಅವರ ಪತ್ನಿ ಮಧುರಾ ಹೆಗಡೆ ಹಾಗೂ ಪುತ್ರಿ ನಿಖಿತಾ ಹೆಗಡೆ ಅವರು ಕೈ ಜೋಡಿಸಿದ್ದಾರೆ.
ಶಿರಸಿಯ ಬೋಪನಳ್ಳಿಯಲ್ಲಿ ದಿವಾಕರ ಗಜಾನನ ಹೆಗಡೆ ಅವರು ವಾಸವಾಗಿದ್ದಾರೆ. ದಿವಾಕರ ಹೆಗಡೆ ಅವರಿಗೆ ಸುಧಾಕರ ಹೆಗಡೆ ಎಂಬ ಸಹೋದರರಿದ್ದಾರೆ. ಅವರಿಬ್ಬರು ಕೃಷಿ-ತೋಟ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಆದರೆ, ಒಬ್ಬರ ಏಳಿಗೆಯನ್ನು ಮತ್ತೊಬ್ಬರಿಗೆ ಸಹಿಸಲು ಆಗುತ್ತಿಲ್ಲ. ಹೀಗಾಗಿ ಅವರವರೇ ಜಮೀನು ವಿಷಯದಲ್ಲಿ ಕಚ್ಚಾಟ ನಡೆಸಿದ್ದಾರೆ. ಈ ಸಹೋದರರ ನಡುವೆ ಮೊದಲಿನಿಂದಲೂ ಭೂಮಿಯ ವ್ಯಾಜ್ಯವಿದ್ದು, ಅದೇ ಹೊಡೆದಾಟಕ್ಕೆ ಕಾರಣವಾಗಿದೆ.
ದಿವಾಕರ ಹೆಗಡೆ ಅವರು ಹೊಂದಿದ ಜಮೀನಿನ ಮೇಲೆ ಸುಧಾಕರ ಹೆಗಡೆ ಅವರು ಕಣ್ಣಿಟ್ಟಿದ್ದಾರೆ. ಆ ಜಮೀನು ಅಭಿವೃದ್ಧಿ ಮಾಡಲು ಅವರು ಬಿಡುತ್ತಿಲ್ಲ. ಅದಾಗಿಯೂ, ದಿವಾಕರ ಹೆಗಡೆ ಅವರು ತೋಟಕ್ಕೆ ಹೋಗಿ ಕೆಲಸ ಮಾಡುವುದನ್ನು ಬಿಟ್ಟಿಲ್ಲ. ಅಗಸ್ಟ 16ರಂದು ಸುಧಾಕರ ಹೆಗಡೆ ಹಾಗೂ ದಿವಾಕರ ಹೆಗಡೆ ಅವರ ನಡುವೆ ಜಗಳ ನಡೆದಿದ್ದು, ಜಮೀನಿನಲ್ಲಿ ಮದ್ದು ಹೊಡೆಯಲು ಹೋಗಿದ್ದ ದಿವಾಕರ ಹೆಗಡೆ ಅವರಿಗೆ ಪೆಟ್ಟು ಬಿದ್ದಿದೆ. ಆ ಹೊಡೆದಾಟದ ನೋವು ಅನುಭವಿಸಿದ ದಿವಾಕರ ಹೆಗಡೆ ಅವರು ಎರಡು ತಿಂಗಳ ವಿಶ್ರಾಂತಿಪಡೆದು ನಂತರ ಪೊಲೀಸ್ ದೂರು ನೀಡಿದ್ದಾರೆ.
ಆಳುಗಳ ಜೊತೆ ಮದ್ದು ಹೊಡೆಯುವಾಗ ಸುಧಾಕರ ಹೆಗಡೆ ಅವರು ದಾಳಿ ಮಾಡಿದ್ದು, ಈ ವೇಳೆ ಮಧುರಾ ಹೆಗಡೆ ಹಾಗೂ ಪುತ್ರಿ ನಿಖಿತಾ ಹೆಗಡೆ ಅವರು ಸಹ `ಇನ್ನೂ ಎರಡು ಏಟು ಹೊಡೆಯಿರಿ’ ಎಂದು ಪ್ರಚೋದಿಸಿದ ಬಗ್ಗೆ ಅವರು ದೂರಿದ್ದಾರೆ. ನೋವಿನಿಂದ ಬಳಲಿದ ದಿವಾಕರ ಹೆಗಡೆ ಅವರು ಶಿರಸಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆದಿದ್ದಾರೆ.