ಅಧಿಕಾರಿ ಹಾಗೂ ಸಿಬ್ಬಂದಿ ವಿರುದ್ಧ ತಳ್ಳಿ ಅರ್ಜಿ ಬರೆಯುವವರ ವಿರುದ್ಧ ಸರ್ಕಾರ ಮಹತ್ವದ ನಿರ್ಣಯ ಮಂಡಿಸಿದ್ದು, ದೋಷಪೂರಿತ ಅರ್ಜಿ ಬರೆಯುವವರಿಗೆ ದಂಡ ವಿಧಿಸಿಲು ಮುಂದಾಗಿದೆ. ಸರ್ಕಾರಿ ನೌಕರರಿಗೆ ಕೇಡುಬಯಸಿ ಅನಗತ್ಯವಾಗಿ ಸಲ್ಲಿಕೆಯಾಗುವ ದೂರುಗಳ ವಿರುದ್ಧ ಕಠಿಣ ಕ್ರಮ ಜರುಗಿಸಲು ಕಾಯ್ದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.
ಅನೇಕ ಕಡೆ ಸರ್ಕಾರಿ ನೌಕರರನ್ನು ಗುರಿಯಾಗಿರಿಸಿಕೊಂಡು ಅನಗತ್ಯ ಆರೋಪ ಮಾಡಲಾಗುತ್ತಿದೆ. ಅಂಥವುಗಳನ್ನು ತಡೆಯುವುದಕ್ಕಾಗಿ ಸರ್ಕಾರ ಇಂಥ ಕಾನೂನು ರಚಿಸಿದೆ. ನೌಕರರಿಗೆ ಕಿರುಕುಳ ನೀಡುವ ಅಥವಾ ಬೆದರಿಸುವ ಉದ್ದೇಶಕ್ಕಗಿ ಸುಳ್ಳು ದೂರು ಸಲ್ಲಿಸುವ ನಾಗರಿಕರ ವಿರುದ್ಧ ಇನ್ಮುಂದೆ ಕಠಿಣ ಕ್ರಮ ಜರುಗಿಸಲಾಗುತ್ತದೆ. ಸಲ್ಲಿಕೆಯಾದ ದೂರಿನ ಬಗ್ಗೆ ತನಿಖೆ ನಡೆಯಲಿದ್ದು, ತನಿಖೆಯಲ್ಲಿ ದೂರು ದುರುದ್ದೇಶಪೂರಿತ ಎಂದು ಸಾಬೀತಾದರೆ ದೂರುದಾರರಿಗೆ ದಂಡ ವಿಧಿಸಲಾಗುತ್ತದೆ. ಆ ದೂರುದಾರ ಮತ್ತೆ ಇಂಥ ತಪ್ಪು ಮುಂದುವರೆಸಿದರೆ ಮತ್ತೊಮ್ಮೆ ದಂಡ ವಿಧಿಸಲಾಗುತ್ತದೆ.
ಸದ್ಯ ಸುಳ್ಳು ದೂರು ನೀಡುವವವರ ಪ್ರತಿ ಅರ್ಜಿಗೆ 1500ರೂ ಹಾಗೂ ಅದೇ ತಪ್ಪು ಮತ್ತೆ ಮಾಡಿದರೆ ಮತ್ತೆ ಪ್ರತಿ ಅರ್ಜಿಗೆ 1500ರೂ ದಂಡ ವಿಧಿಸಲಾಗುತ್ತದೆ. ದಂಡ ವಿಧಿಸುವ ಮುನ್ನ ದೂರುದಾರರಿಗೆ ಅಹವಾಲು ಹೇಳಿಕೊಳ್ಳಲು ಅವಕಾಶ ನೀಡಲಿದ್ದು, ಅವರ ಅಹವಾಲು ಸರಿಯಿಲ್ಲ ಎಂದಾದರೆ ಮಾತ್ರ ದಂಡವಿಧಿಸುವ ಆದೇಶ ನೀಡಲಾಗುತ್ತದೆ. ಆ ದಂಡದ ಮೊತ್ತವನ್ನು ಭೂ ಕಂದಾಯ ಹಿಂಬಾಕಿಯAತೆ ವಸೂಲಿ ಮಾಡಲಾಗುತ್ತದೆ.
ಇದರೊಂದಿಗೆ ಕರ್ನಾಟಕ ಸಕಾಲ ಸೇವೆಗಳ (ತಿದ್ದುಪಡಿ) ಅಧಿನಿಯಮ 2026ರ ಅಡಿ ಸೇವೆಗಳನ್ನು ವಿಳಂಬಗೊಳಿಸುವ ಅಧಿಕಾರಿಗಳಿಗೆ ವಿಧಿಸುವ ಪರಿಹಾರ ವೆಚ್ಚ ನೀಡುವ ಬಗ್ಗೆಯೂ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಈ ನೂತನ ಪರಿಷ್ಕೃತ ದರಗಳು ತಕ್ಷಣದಿಂದಲೇ ಜಾರಿಗೆ ಬಂದಿವೆ. ಸಾರ್ವಜನಿಕರಿಗೆ ನಿಗದಿತ ಸಮಯದೊಳಗೆ ಸೇವೆಗಳನ್ನು ಒದಗಿಸಲು ಅಥವಾ ಮೇಲ್ಮನವಿಗಳನ್ನು ವಿಲೇವಾರಿ ಮಾಡಲು ವಿಫಲರಾಗುವ ಸಕ್ಷಮ ಪ್ರಾಧಿಕಾರಿ, ಹೆಸರಿಸಲಾದ ಅಧಿಕಾರಿ ಅಥವಾ ಮೇಲ್ಮನವಿ ಪ್ರಾಧಿಕಾರದ ಅಧಿಕಾರಿಗಳಿಂದ ಈ ಪರಿಹಾರ ವೆಚ್ಚವನ್ನು ವಸೂಲಿ ಮಾಡಲಾಗುತ್ತದೆ.