ಕೃಷಿ ಉದ್ದೇಶಕ್ಕಾಗಿಪಡೆದ ಸಾಲ ವಸೂಲಾತಿ ವಿಷಯದಲ್ಲಿ ರೈತರ ಮೇಲೆ ಬ್ಯಾಂಕುಗಳು ಬಲವಂತದ ಕ್ರಮ ಜರುಗಿಸುವ ಹಾಗಿಲ್ಲ’ ಎಂದು ಎಲ್ಲಾ ಬ್ಯಾಂಕ್ ಅಧಿಕಾರಿಗಳಿಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಿಲೀಷ್ ಶಶಿ ಅವರು ಸೂಚಿಸಿದ್ದಾರೆ. ಈ ಸೂಚನೆ ಮೀರಿ ಅನುಚಿತವಾಗಿ ವರ್ತಿಸಿದರೆ ಕಠಿಣ ಕ್ರಮ ಜರುಗಿಸುವುದಾಗಿಯೂ ಅವರು ಎಚ್ಚರಿಕೆ ನೀಡಿದ್ದಾರೆ.
ಶನಿವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಲೀಡ್ ಬ್ಯಾಂಕ್ ವಿಶೇಷ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು `ಈ ಬಾರಿಯ ಹವಾಮಾನ ವೈಪರೀತ್ಯದಿಂದಾಗಿ ಜಿಲ್ಲೆಯ ಮುಂಡಗೋಡು, ಯಲ್ಲಾಪುರ, ಅಂಕೋಲಾ, ಭಟ್ಕಳ, ಹಳಿಯಾಳ, ಶಿರಸಿ, ಜೋಯಿಡಾ, ದಾಂಡೇಲಿ ತಾಲೂಕುಗಳನ್ನು ಸರ್ಕಾರವು ಬರಪೀಡಿತ ಎಂದು ಘೋಷಣೆ ಮಾಡಿದೆ. ಈ ತಾಲೂಕುಗಳಲ್ಲಿ ಕೃಷಿ, ತೋಟಗಾರಿಕೆ, ಪಶುಪಾಲನೆ, ಮೀನುಗಾರಿಕೆ ಮತ್ತು ಕೃಷಿ ಆಧಾರಿತ ಉದ್ಯಮಗಳಿಗೆ ರೈತರು ಪಡೆದಿರುವ ಸಾಲದ ಕಂತುಗಳನ್ನು ಒತ್ತಾಯ ಪೂರ್ವಕವಾಗಿ ಮತ್ತು ಬಲವಂತದ ಕ್ರಮಗಳ ಮೂಲಕ ಪಡೆಯುವ ಹಾಗಿಲ್ಲ’ ಎಂದು ಹೇಳಿದರು. ಈ ಸಾಲಗಳ ಮರು ಪಾವತಿ ಅವಧಿಯನ್ನು ಸರ್ಕಾರದ ಮಾರ್ಗಸೂಚಿಯಂತೆ ವಿಸ್ತರಣೆ ಮಾಡಿರುವ ಅವಧಿಯನ್ನು ಸಂಬoಧಪಟ್ಟ ರೈತರ ಬ್ಯಾಂಕ್ ಖಾತೆಗಳಿಗೆ ಸ್ವಯಂ ಚಾಲಿತವಾಗಿ ಜಾರಿಗೊಳಿಸುವಂತೆ ನಿರ್ದೇಶನ ನೀಡಿದರು.
`ಬರಗಾಲದ ಕಾರಣದಿಂದ ಆರ್ಥಿಕ ತೊಂದರೆಗೊಳಗಾದ ರೈತರು ಅನಧಿಕೃತ ಹಣಕಾಸು ಸಂಸ್ಥೆಗಳು, ಲೇವಾದೇವಿಗಾರರ ಸಾಲಕ್ಕೆ ಸಿಲುಕುವುದನ್ನು ತಡೆಯಲು ಬ್ಯಾಂಕ್ಗಳು ರೈತರಿಗೆ ಹೊಸ ಸಾಲಗಳನ್ನು ಆದ್ಯತೆಯ ಮೇಲೆ ಮಂಜೂರು ಮಾಡಬೇಕು. ಬರದ ಸಂದರ್ಭದಲ್ಲಿ ರೈತರ ನೆರವಿಗೆ ಬ್ಯಾಂಕ್ ಗಳಲ್ಲಿ ಲಭ್ಯವಿರುವ ಎಲ್ಲಾ ನೆರವಿನ ಕ್ರಮಗಳ ಕುರಿತಂತೆ ರೈತರಿಗೆ ವ್ಯಾಪಕ ರೀತಿಯಲ್ಲಿ ಅರಿವು ಮತ್ತು ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಬೇಕು’ ಎಂದರು. ಎಲ್ಲಾ ಬ್ಯಾಂಕ್ಗಳು ತಮ್ಮ ವ್ಯಾಪ್ತಿಯಲ್ಲಿನ ರೈತರಿಗೆ ಒದಗಿಸಿರುವ ಆರ್ಥಿಕ ನೆರವು ಕ್ರಮಗಳ ಕುರಿತಂತೆ ಸಂಪೂರ್ಣ ಮಾಹಿತಿಯನ್ನು ಮತ್ತು ಈ ಕುರಿತು ಸೂಕ್ತ ದಾಖಲೆಗಳನ್ನು ಮುಂದಿನ ಸಭೆಯಲ್ಲಿ ಪ್ರಸ್ತುತಪಡಿಸುವಂತೆ ದಿಲೀಷ್ ಶಶಿ ಸೂಚನೆ ನೀಡಿದರು.
`ಕೃಷಿ, ತೋಟಗಾರಿಕೆ, ಪಶುಪಾಲನೆ, ಮೀನುಗಾರಿಕೆ ಮತ್ತು ಕೈಗಾರಿಕಾ ಇಲಾಖೆಯ ಅಧಿಕಾರಿಗಳು ರೈತರಿಗೆ ಬರ ಪರಿಹಾರ ಕ್ರಮವಾಗಿ ಸರ್ಕಾರ ಕೈಗೊಂಡಿರುವ ಬ್ಯಾಂಕಿoಗ್ ಸಂಬoಧಿತ ನೆರವು ಕ್ರಮಗಳ ಬಗ್ಗೆ ವ್ಯಾಪಕ ಮಾಹಿತಿ ನೀಡಬೇಕು’ ಎಂದರು. ಸಭೆಯಲ್ಲಿ ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಕರೀಂ ಅಸದಿ, ನಬಾರ್ಡ್ ಮೆನೇಜರ್ ಸುಶೀಲ್ ಕುಮಾರ್, ಲೀಡ್ ಬ್ಯಾಂಕ್ ಮೆನೇಜರ್ ರಾಜಪ್ಪ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಬ್ಯಾಂಕ್ ಅಧಿಕಾರಿಗಳು ಭಾಗವಹಿಸಿದ್ದರು.