30 ವರ್ಷಕ್ಕೂ ಅಧಿಕ ಕಾಲ ಕಲಾ ಸೇವೆಯಲ್ಲಿ ತೊಡಗಿರುವ ಅಮದಳ್ಳಿಯ ಪುರಷೋತ್ತಮ ಗೌಡ ಅವರಿಗೆ ಜಾನಪದ ಅಕಾಡೆಮಿಯ ಪ್ರಶಸ್ತಿ ಘೋಷಣೆಯಾಗಿದೆ.
ಕರ್ನಾಟಕ ಜಾನಪದ ಅಕಾಡೆಮಿಯೂ ಜಾನಪದ ಕಲೆಗಳಿಗಾಗಿ ಶ್ರಮಿಸುತ್ತಿರುವವರಿಗೆ ಈ ಪ್ರಶಸ್ತಿ ನೀಡುತ್ತದೆ. ಜಾನಪದ ಕ್ಷೇತ್ರ ತಜ್ಞರಿಗೆ ವಾರ್ಷಿಕ ಪ್ರಶಸ್ತಿ ನೀಡಿ ಗೌರವಿಸುತ್ತಿದೆ. ಬೀದಿ ನಾಟಕ, ಜನ ಜಾಗೃತಿಗಾಗಿ ಸಂಚಾರ, ಜಡೆ ಕೋಲಾಟ, ಯಕ್ಷಗಾನ, ಹಾಲಕ್ಕಿ ಕುಣಿತ ಸೇರಿ ವಿವಿಧ ಪ್ರಕಾರದ ಕಲೆಗಳಲ್ಲಿ ತೊಡಗಿಸಿಕೊಂಡಿರುವ ಪುರುಷೋತ್ತಮ ಗೌಡ ಅವರಿಗೆ ಈ ಬಾರಿಯ ಪ್ರಶಸ್ತಿ ಸಿಕ್ಕಿದೆ.
ಪುರುಷೋತ್ತಮ ಗೌಡ ಅವರು ಮುಖ್ಯವಾಗಿ ಹಾಲಕ್ಕಿ ಸುಗ್ಗಿ ಕುಣಿತದ ಕಲಾವಿದರಾಗಿದ್ದಾರೆ. ರಾಜ್ಯ ಬೀದಿ ನಾಟಕ ತಂಡದ ಗೌರವಾಧ್ಯಕ್ಷರಾಗಿರುವ ಅವರು ಅಮದಳ್ಳಿಯಲ್ಲಿ ಜಾನಪದ ಉತ್ಸವವನ್ನು ನಡೆಸುತ್ತ ಬಂದಿದ್ದಾರೆ. ಗ್ರಾಮ ಪಂಚಾಯತ ಸದಸ್ಯರಾಗಿಯೂ ಕೆಲಸ ಮಾಡಿದ್ದಾರೆ. ಯುವಜನ ಮೇಳೆ, ಜಾನಪದ ಮೇಳ, ಕಬ್ಬಡಿಯಂಥ ಕ್ರೀಡಾಕೂಟಗಳನ್ನು ಸಂಘಟಿಸಿದ್ದಾರೆ. ವಿವಿಧ ವಿಚಾರ ಸಂಕೀರಣ, ವೈದ್ಯಕೀಯ ನೆರವು ನೀಡುವ ವಿಷಯದಲ್ಲಿಯೂ ಮುಂಚೂಣಿಯಲ್ಲಿದ್ದಾರೆ.
ದೆಹಲಿ, ರಾಜಸ್ಥಾನ, ಬಿಹಾರ, ಗೋವಾ ಸೇರಿ ದೇಶದ ಅನೇಕ ಕಡೆ ಪುರುಷೋತ್ತಮ ಗೌಡ ಅವರು ತಮ್ಮ ಪ್ರತಿಭೆ ಪ್ರದರ್ಶಿಸಿದ್ದಾರೆ. ಅನೇಕ ಬಾರಿ ಅವರು ಕರಾವಳಿ ಉತ್ಸವ, ಕದಂಬ ಉತ್ಸವ ಸೇರಿ ಹಲವು ಮುಖ್ಯ ವೇದಿಕೆಯಲ್ಲಿ ಮಿಂಚಿದ್ದಾರೆ. ಈಗಾಗಲೇ ವಿವಿಧ ಪ್ರಶಸ್ತಿ ಸ್ವೀಕರಿಸಿರುವ ಪುರುಷೋತ್ತಮ ಗೌಡ ಅವರಿಗೆ ಈ ಬಾರಿ ಕರ್ನಾಟಕ ಜಾನಪದ ಅಕಾಡೆಮಿಯೂ ವಾರ್ಷಿಕ ಪ್ರಶಸ್ತಿ ಘೋಷಿಸಿದೆ.