ಶಿವಾನಂದ ಕುಂದರ್ಗಿ ಅವರ ಹೊಲದ ಮೇಲೆ ಹಾದು ಹೋದ ವಿದ್ಯುತ್ ತಂತಿ ದಿಢೀರ್ ಆಗಿ ತುಂಡಾಗಿದ್ದು, ಪರಿಣಾಮ ಇಡೀ ಹೊಲ ಹೊತ್ತಿ ಉರಿದಿದೆ. ಇದರಿಂದ ಅಲ್ಲಿ ಬೆಳೆದಿದ್ದ ಭತ್ತ ಸುಟ್ಟು ಹೋಗಿದ್ದು, ಶಿವಾನಂದ ಕುಂದರ್ಗಿ ಅವರಿಗೆ 90 ಸಾವಿರ ರೂ ಹಾಗೂ ಯಲ್ಲಪ್ಪ ರಾಮಣ್ಣ ಅವರಿಗೆ 50 ಸಾವಿರ ರೂ ನಷ್ಟವಾಗಿದೆ.
ಮುಂಡಗೋಡಿನ ಕುಂದರ್ಗಿ ಗ್ರಾಮದಲ್ಲಿ ಶಿವಾನಂದ ಹನುಮಂತಪ್ಪ ಕುಂದರ್ಗಿ ಯಲ್ಲಪ್ಪ ರಾಮಣ್ಣ ಅವರು ಕೃಷಿ ಭೂಮಿ ಹೊಂದಿದ್ದಾರೆ. ಬರಗಾಲದ ನಡುವೆಯೂ ಅವರು ಈ ಬಾರಿ ಭತ್ತ ಬೆಳೆದಿದ್ದಾರೆ. ತಮ್ಮ ಬೆಳೆ ಬದುಕಿಸಿಕೊಳ್ಳಲು ಅವರು ಸಾಕಷ್ಟು ಶ್ರಮಿಸಿದ್ದು, ವಿದ್ಯುತ್ ಅವಘಡದಿಂದಾಗಿ ಅವರ ಪೂರ್ತಿ ಫಸಲು ನಾಶವಾಗಿದೆ. ಹೊಲದಲ್ಲಿ ವಿದ್ಯುತ್ ತಂತಿ ತುಂಡಾಗಿ ಬಿದ್ದ ಪರಿಣಾಮ ಕಟಾವಿಗೆ ಬಂದಿದ್ದ ಭತ್ತದ ಬೆಳೆಗೆ ಬೆಂಕಿ ಹೊತ್ತಿಕೊಂಡಿದೆ. ಅಲ್ಲಿದ್ದ ಅಪಾರ ಪ್ರಮಾಣದ ಬೆಳೆ ಸಂಪೂರ್ಣ ಸುಟ್ಟು ಕರಕಲಾಗಿದೆ.
ವಿದ್ಯುತ್ ತಂತಿ ಬಿದ್ದ ತಕ್ಷಣವೇ ಬೆಂಕಿಯ ಕೆನ್ನಾಲಗೆ ಹಬ್ಬಿದ್ದು, ಸುಮಾರು ಎರಡು ಎಕರೆ ಜಮೀನಿನಲ್ಲಿದ್ದ ಭತ್ತ ನಾಶವಾಗಿದೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಗ್ರಾಮಸ್ಥರು ಬೆಂಕಿ ನಂದಿಸಲು ಹರಸಾಹಸ ಪಟ್ಟರಾದರೂ ಬೆಳೆ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ವಿದ್ಯುತ್ ಇಲಾಖೆಯ ನಿರ್ವಹಣಾ ವೈಫಲ್ಯವೇ ಈ ಅವಘಡಕ್ಕೆ ನೇರ ಕಾರಣ ಎಂದು ಅಲ್ಲಿನವರು ದೂರಿದ್ದಾರೆ.