ಸಾಲು ಮರದ ತಿಮ್ಮಕ್ಕ ಉದ್ಯಾನವನದ ಬಳಿ ಸ್ಕೂಟಿಯಿಂದ ಬಿದ್ದು ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದ ದರ್ಶನ ನಾಯ್ಕ ಅವರನ್ನು 112 ಸಿಬ್ಬಂದಿ ರಕ್ಷಿಸಿದ್ದಾರೆ. ಪ್ರಕಾಶ ಬೋವಿವಡ್ಡರ್ ಹಾಗೂ ಮುಕ್ತಿಯಾರ್ ಮಂಡಕ್ಕಿ ಅವರ ಸಮಯಪ್ರಜ್ಞೆಯಿಂದಾಗಿ ದರ್ಶನ ನಾಯ್ಕ ಅವರಿಗೆ ಸೂಕ್ತ ಚಿಕಿತ್ಸೆ ದೊರೆತಿದೆ.
ಶಿರಸಿ ಕೆ ಎಚ್ ಬಿ ಕಾಲೋನಿಯ ಸಾಲು ಮರದ ತಿಮ್ಮಕ್ಕ ಉದ್ಯಾನವನದ ಬಳಿ ಶುಕ್ರವಾರ ರಾತ್ರಿ ಅಪಘಾತವೊಂದು ನಡೆದಿತ್ತು. ಸ್ಕೂಟಿಯಿಂದ ಬಿದ್ದ ವ್ಯಕ್ತಿಯೊಬ್ಬರು ಗಂಭೀರ ಗಾಯಗೊಂಡ ಬಗ್ಗೆ ರಾತ್ರಿ 1 ಗಂಟೆ ಅವಧಿಗೆ ಪೊಲೀಸರಿಗೆ ಫೋನ್ ಬಂದಿತ್ತು. 112 ಸಹಾಯವಾಣಿ ಕೇಂದ್ರದವರು ಫೋನ್ ಸ್ವೀಕರಿಸಿ, ಆ ಬಗ್ಗೆ ಶಿರಸಿ ಸಿಬ್ಬಂದಿಗೆ ಮಾಹಿತಿ ರವಾನಿಸಿದ್ದರು. 112 ಸಿಬ್ಬಂದಿ ಪ್ರಕಾಶ ಬೋವಿವಡ್ಡರ್ ಹಾಗೂ ಮುಕ್ತಿಯಾರ್ ಮಂಡಕ್ಕಿ ಅವರು ತಕ್ಷಣ ಅಲ್ಲಿಗೆ ಧಾವಿಸಿದ್ದರು.
ಅಲ್ಲಿ ದರ್ಶನ ಮಂಜುನಾಥ ನಾಯ್ಕ ಅವರು ಸ್ಕೂಟಿಯಿಂದ ಬಿದ್ದು ನೋವು ಮಾಡಿಕೊಂಡಿದ್ದರು. ಅವರ ತಲೆಗೆ ಗಂಭೀರ ಪ್ರಮಾಣದಲ್ಲಿ ಗಾಯವಾಗಿತ್ತು. ರಕ್ತ ಸುರಿಯುತ್ತಿತ್ತು. ತಕ್ಷಣ ಪೊಲೀಸರು ಆಂಬುಲೆನ್ಸಿಗೆ ಫೋನ್ ಮಾಡಿದ್ದು, ತಮ್ಮ ವಾಹನದಲ್ಲಿಯೇ ಗಾಯಾಳು ಸಾಗಿಸುವ ಪ್ರಯತ್ನ ಮಾಡಿದ್ದರು. ಆ ವೇಳೆಗೆ ಅಲ್ಲಿ ಆಂಬುಲೆನ್ಸ್ ಆಗಮಿಸಿತು. ಪೊಲೀಸ್ ಸಿಬ್ಬಂದಿ ಸಾಕಷ್ಟು ಮುತುವರ್ಜಿವಹಿಸಿ ದರ್ಶನ ನಾಯ್ಕ ಅವರನ್ನು ಪಿಜಿ ಆಸ್ಪತ್ರೆಗೆ ಸೇರಿಸಿದರು.
ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ದರ್ಶನ ನಾಯ್ಕ ಅವರಿಗೆ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ತಡರಾತ್ರಿಯ ತುರ್ತು ಸನ್ನಿವೇಶದ ವೇಳೆ 112 ಸಿಬ್ಬಂದಿ ಗಾಯಗೊಂಡವರಿಗೆ ನೆರವಾಗಿದ್ದು, ಪೊಲೀಸ್ ಅಧೀಕ್ಷಕರು ಈ ಕಾರ್ಯದ ಬಗ್ಗೆ ಮೆಚ್ಚುಗೆವ್ಯಕ್ತಪಡಿಸಿದ್ದಾರೆ.