ಶಿರಸಿ ಕೆಎಚ್‌ನಿ ಕಾಲೋನಿಯ ಮೆಕಾನಿಕ್ ಪರೀಕ್ಷಿತ್ ಪತ್ತಾರ್ ಅವರು ಮಾದಕ ವ್ಯಸನ ಸೇವಿಸಿ ಅನುಚಿತವಾಗಿ ವರ್ತಿಸಿದ್ದಾರೆ. ಮಾರಿಕಾಂಬಾ ಕ್ರೀಡಾಂಗಣದ ಬಳಿ ಅಲೆದಾಡುತ್ತಿದ್ದ ಅವರನ್ನು ಪಿಸೈ ಗೀತಾ ಕಲಘಟಗಿ ಅವರು ವೈದ್ಯಕೀಯ ಪರೀಕ್ಷೆಗೆ ಕಳುಹಿಸಿದ್ದಾರೆ.
ಶಿರಸಿಯ ಕೆಎಚ್‌ನಿ ಕಾಲೋನಿಯಲ್ಲಿ ಪರೀಕ್ಷಿತ್ ಶ್ರೀನಿವಾಸ ಪತ್ತಾರ್ ಅವರು ವಾಸವಾಗಿದ್ದಾರೆ. ಮೆಕಾನಿಕ್ ಆಗಿ ಅವರು ಕೆಲಸ ಮಾಡಿಕೊಂಡಿದ್ದಾರೆ. 26ನೇ ವಯಸ್ಸಿನಲ್ಲಿಯೇ ಅವರು ದುಶ್ಚಟದ ದಾಸರಾಗಿದ್ದಾರೆ. ತಮ್ಮ ದುಡಿಮೆಯ ಬಹುಪಾಲು ಹಣವನ್ನು ಅವರು ಮೋಜು-ಮಸ್ತಿಗೆ ಖಾಲಿ ಮಾಡುತ್ತಿದ್ದಾರೆ. ಅಕ್ಟೊಬರ್ 3ರ ಬೆಳಗ್ಗೆ ಶಿರಸಿ ಕಾಲೇಜು ರಸ್ತೆಯ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣ ಕ್ರಾಸಿನ ಬಳಿ ಅವರು ಸಾರ್ವಜನಿಕರ ಜೊತೆ ಅನುಚಿತವಾಗಿ ವರ್ತಿಸುತ್ತಿದ್ದು, ಇದನ್ನು ನೋಡಿದ ಜನ ಪೊಲೀಸರಿಗೆ ಫೋನ್ ಮಾಡಿದ್ದಾರೆ.
ಶಿರಸಿ ಮಾರುಕಟ್ಟೆ ಠಾಣೆಯ ಪಿಸೈ ಗೀತಾ ಕಲಘಟಗಿ ಅವರು ತಮ್ಮ ತಂಡದ ಜೊತೆ ಅಲ್ಲಿಗೆ ಹೋಗಿದ್ದಾರೆ. ಪರೀಕ್ಷಿತ್ ಪತ್ತಾರ್ ಅವರು ಆಗಲೂ ಅಮಲಿನಲ್ಲಿಯೇ ಇದ್ದು, ಅವರನ್ನು ಪೊಲೀಸರು ವಶಕ್ಕೆಪಡೆದಿದ್ದಾರೆ. ಪಂಡೀತ್ ಸಾರ್ವಜನಿಕ ಆಸ್ಪತ್ರೆಯಲ್ಲಿ ಪರೀಕ್ಷಿತ್ ಪತ್ತಾರ್ ಅವರ ವೈದ್ಯಕೀಯ ತಪಾಸಣೆ ಮಾಡಿದ್ದಾರೆ. ಆಗ, ಅವರು ಅತಿಯಾಗಿ ಗಾಂಜಾ ಸೇವಿಸಿರುವುದು ದೃಢವಾಗಿದೆ. ಗಾಂಜಾ ಅಮಲಿನಲ್ಲಿಯೇ ಅನುಚಿತವಾಗಿ ವರ್ತಿಸುತ್ತಿರುವುದು ಬೆಳಕಿಗೆ ಬಂದಿದೆ. ಈ ಹಿನ್ನಲೆ ಪರೀಕ್ಷಿತ್ ಪತ್ತಾರ್ ಅವರ ವಿರುದ್ಧ ಪೊಲೀಸರು ಕ್ರಮ ಜರುಗಿಸಿದ್ದಾರೆ.