ಶಿರಸಿಯಲ್ಲಿನ ಕೆಲ ಸಾಮಾಜಿಕ ಜಾಲತಾಣಗಳು ಅಲ್ಲಿನ ಸಾಮಾಜಿಕ ಸ್ವಾಸ್ಥ್ಯವನ್ನು ಹಾಳು ಮಾಡುತ್ತಿವೆ. ಪ್ರಮುಖ ವ್ಯಕ್ತಿಗಳನ್ನು ಗುರಿಯಾಗಿರಿಸಿಕೊಂಡು ಜಾಲತಾಣಗಳ ಮೂಲಕ ಅವರ ತೇಜೋವಧೆ ನಡೆಸುವುದನ್ನೇ ಅವು ಗುರಿಯಾಗಿರಿಸಿಕೊಂಡಿವೆ.
ಕೆಲ ಕಿಡಿಗೇಡಿಗಳು ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಐಡಿಗಳನ್ನು ಸೃಷ್ಠಿಸಿದ್ದಾರೆ. ಅಲ್ಲಿ ಎಐ ತಂತ್ರಜ್ಞಾನದ ಮೂಲಕ ವಿವಿಧ ಪೋಸ್ಟುಗಳನ್ನು ಹಾಕುತ್ತಿದ್ದಾರೆ. ಪ್ರತಿಷ್ಠಿತ ವ್ಯಕ್ತಿ, ಸಂಘ-ಸoಸ್ಥೆಗಳ ವಿರುದ್ಧ ಅಲ್ಲಿ ಪರೋಕ್ಷವಾಗಿ ಬರೆಯಲಾಗುತ್ತಿದ್ದು, ಅದನ್ನು ಹೋಲುವ ವ್ಯಕ್ತಿಗಳು ಇರುಸು-ಮುರುಸು ಅನುಭವಿಸುತ್ತಿದ್ದಾರೆ. ಈ ವಿಷಯವಾಗಿ ಶಿರಸಿಯಲ್ಲಿ ಹೊಡೆದಾಟವೂ ನಡೆದಿದ್ದು, ಅದು ರಾಜಿಯಲ್ಲಿ ಅಂತ್ಯವಾಗಿದೆ. ಅದಾಗಿಯೂ, ಸಾರ್ವಜನಿಕ ಸ್ಥಳದಲ್ಲಿ ಹೊಡೆದಾಟ ನಡೆಸಿದ ನಗರಸಭೆ ಮಾಜಿ ಅಧ್ಯಕ್ಷ ಪ್ರದೀಪ ಶೆಟ್ಟಿ ಹಾಗೂ ಸ್ವಸ್ತಿಕ್ ಮಿಡಿಯಾ ಹೆಸರಿನ ರವೀಶ ಹೆಗಡೆ ವಿರುದ್ಧ ಪೊಲೀಸರು ಸುಮೋಟೋ ಕೇಸು ಹಾಕಿದ್ದಾರೆ.
`ಗಣ್ಯ ವ್ಯಕ್ತಿಗಳ ತೇಜೋವಧೆ, ಸುಳ್ಳು ಆರೋಪ ಹಾಗೂ ಬ್ಲ್ಯಾಕ್ಮೇಲ್ ಮೂಲಕ ಹಣ ವಸೂಲಿ ಮಾಡುವ ಪ್ರವೃತ್ತಿಗೆ ಕಡಿವಾಣ ಹಾಕಬೇಕು. ಹೀಗಾಗಿ ಸಮಾಜದ ಸ್ವಾಸ್ಥ್ಯವನ್ನು ಹಾಳುಮಾಡುತ್ತಿರುವವರ ವಿರುದ್ಧ ಸಾರ್ವಜನಿಕರು ದೂರು ನೀಡಬೇಕು’ ಎಂದು ನಗರಸಭೆ ಮಾಜಿ ಅಧ್ಯಕ್ಷ ಪ್ರದೀಪ ಶೆಟ್ಟಿ ಅವರು ಮನವಿ ಮಾಡಿದ್ದಾರೆ. `ಶಿರಸಿ ನಗರವು ಸುಂದರ ಹಾಗೂ ಸೌಹಾರ್ದಯುತ ವಾತಾವರಣಕ್ಕೆ ಹೆಸರುವಾಸಿಯಾಗಿದ್ದು, ಇಲ್ಲಿನ ಜನ ಅನ್ಯೋನ್ಯವಾಗಿ ಬದುಕುತ್ತಿದ್ದಾರೆ. ಆದರೆ, ಕೆಲವರು ಸೋಶಿಯಲ್ ಮಿಡಿಯಾದಲ್ಲಿ ನಕಲಿ ಖಾತೆ ಮೂಲಕ ಜನರಿಗೆ ಸಮಸ್ಯೆ ಮಾಡುತ್ತಿದ್ದಾರೆ’ ಎಂದವರು ದೂರಿದ್ದಾರೆ. `ನಗರದಲ್ಲಿ ಕಟ್ಟಡ ನಿರ್ಮಿಸಿ ಉದ್ಯಮ ಆರಂಭಿಸುವವರು ಇಂಥ ಸಾಮಾಜಿಕ ಜಾಲತಾಣಗಳ ಭಯದಲ್ಲೇ ಇರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ನಗರಸಭೆ, ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಕೂಡ ಇಂತಹವರ ಕಿರುಕುಳದ ಭಯದಿಂದ ಅಸಹಾಯಕರಾಗಿದ್ದಾರೆ’ ಎಂದವರು ನೋವು ತೋಡಿಕೊಂಡಿದ್ದಾರೆ.
`ಜಾಲತಾಣದಲ್ಲಿ ನಕಲಿ ಖಾತೆ ರಚಿಸುವವರಿಗೆ ಕೆಲ ಅಧಿಕಾರಿಗಳು ಅನಗತ್ಯ ಪ್ರೋತ್ಸಾಹ ಮತ್ತು ಆತಿಥ್ಯ ನೀಡುತ್ತಿದ್ದಾರೆ. ಅದನ್ನು ಅವರು ನಿಲ್ಲಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಗಂಭೀರವಾಗಲಿದೆ’ ಎಂದು ಪ್ರದೀಪ ಶೆಟ್ಟಿ ಅವರು ಎಚ್ಚರಿಸಿದ್ದಾರೆ. ಜೆಡಿಎಸ್ ಮುಖಂಡ ಉಪೇಂದ್ರ ಪೈ ಅವರು ಮಾತನಾಡಿ `ಕಳೆದ ಐದು ವರ್ಷಗಳಿಂದ ಫೇಕ್ ಸೋಶಿಯಲ್ ಮೀಡಿಯಾ ಹಾವಳಿ ಹೆಚ್ಚಾಗಿದೆ. ಸಾರ್ವಜನಿಕವಾಗಿ ಸಮಾಜಸೇವೆ ಮಾಡಿದವರನ್ನೂ ಟೀಕಿಸಿ, ಅವರ ತೇಜೋವಧೆ ಮಾಡುವ ಪ್ರಯತ್ನಗಳು ನಡೆಯುತ್ತಿವೆ. ಇಂತಹ ಚಟುವಟಿಕೆಗಳು ಸಮಾಜದ ಶಾಂತಿ ಮತ್ತು ಸೌಹಾರ್ದಕ್ಕೆ ಧಕ್ಕೆ ತರುತ್ತಿ’ ಎಂದು ಕಿಡಿಕಾರಿದರು. `ಕೆಲವು ಗಣ್ಯ ವ್ಯಕ್ತಿಗಳಿಗೆ ನೀಡಲಾದ ಕಿರುಕುಳದಿಂದ ಕೆಲ ಅನಾಹುತಗಳು ನಡೆದಿದೆ. ವಿಕೃತ ಮನೋಭಾವದ ಕೆಲವರು ವ್ಯಕ್ತಿಗಳ ಚಾರಿತ್ರ್ಯಹರಣ ಮಾಡಿ, ಬಳಿಕ ಇತರರ ಮೂಲಕ ವ್ಯವಹಾರ ಕುದುರಿಸುವ ಪ್ರಯತ್ನ ನಡೆಸುತ್ತಿದ್ದಾರೆ’ ಎಂದು ದೂರಿದರು. ಶಿರಸಿ ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ ಅವರು `ಮಾರಿಕಾಂಬಾ ದೇವಸ್ಥಾನದ ಧರ್ಮದರ್ಶಿಗಳ ಆಯ್ಕೆ ಸಂದರ್ಭದಲ್ಲಿ ಕೆಲವು ಫೇಕ್ ಸೋಶಿಯಲ್ ಮೀಡಿಯಾ ಖಾತೆಗಳ ಮೂಲಕ ವ್ಯಕ್ತಿಗಳ ಮಾನಹರಣ ಮಾಡಲಾಗಿದೆ’ ಎಂದು ದೂರಿದರು. `ಈ ಕುರಿತುದೂರು ನೀಡಿದ್ದರೂ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಪ್ರಕಾಶ ಪಾಲಂಕರ, ರಾಜು ಮುಕ್ರಿ ಅವರು ಈ ಹೇಳಿಕೆಗೆ ತಲೆಯಾಡಿಸಿದರು.