ಕಾರವಾರ-ಕೈಗಾ ಮಾರ್ಗವಾಗಿ ಅತಿ ಬಾರದ ಸರಕು ಹೊತ್ತು ಸಾಗುವ ಲಾರಿಗಳ ಓಡಾಟ ಮಿತಿ ಮೀರಿದೆ. ಪರಿಣಾಮ ಈ ಭಾಗದ ರಸ್ತೆ ಇನ್ನಷ್ಟು ಹದಗೆಡುವ ಆತಂಕ ಶುರುವಾಗಿದೆ.
ADVERTISEMENT
ಕಾರವಾರ ಕೈಗಾ ಮಾರ್ಗದ ರಸ್ತೆ ಅತಿಭಾರದ ವಾಹನಗಳ ಓಡಾಟಕ್ಕೆ ಸೂಕ್ತವಲ್ಲ ಎಂದು ಲೋಕೋಪಯೋಗಿ ಇಲಾಖೆ ವರದಿ ಸಲ್ಲಿಸಿತ್ತು. ಈ ಹಿನ್ನಲೆ ದೇವಳಮಕ್ಕಿ-ಕೆರವಡಿ-ಬೋಳ್ವೆ-ಇರಾಪಾ ಮಾರ್ಗದಲ್ಲಿ ಭಾರೀ ಗಾತ್ರದ ವಾಹನಗಳ ಓಡಾಟ ನಿಷೇಧಿಸಿ ಜಿಲ್ಲಾಡಳಿತ ಆದೇಶಿಸಿತ್ತು. ಅದಾದ ನಂತರ ಕೈಗಾ ಅಣು ವಿದ್ಯುತ್ ಘಟಕದವರು ರಸ್ತೆ ನಿರ್ವಹಣೆಯ ಹೊಣೆ ಹೊತ್ತಿದ್ದು, ನವೀಕರಣ ಕಾಮಗಾರಿ ಶುರು ಮಾಡಿರುವುದಾಗಿ ಮಾಹಿತಿ ನೀಡಿದ್ದರು. ಈ ಹಿನ್ನಲೆ ಜಿಲ್ಲಾಡಳಿತ ಲಾರಿಗಳ ಓಡಾಟಕ್ಕೆ ಅವಕಾಶ ನೀಡಿತ್ತು. ಆದರೆ, ಸದ್ಯ 45 ಟನ್’ಗೂ ಅಧಿಕ ಬಾರದ ಸರಕು ಹೊತ್ತ ಲಾರಿಗಳು ಈ ಮಾರ್ಗದಲ್ಲಿ ಸಂಚರಿಸುತ್ತಿವೆ.
ADVERTISEMENT
ಅಗಸ್ಟ 16ರಂದು ಜಿಲ್ಲಾಡಳಿತ ಹೊರಡಿಸಿದ ಆದೇಶದಲ್ಲಿ 15 ಎಂಟಿ/ಆಕ್ಟಲ್ ಮಿತಿಯ ವಾಹನಗಳ ಓಡಾಟಕ್ಕೆ ಈ ಮಾರ್ಗವಾಗಿ ಅವಕಾಶ ನೀಡಲಾಗಿದೆ. ಸಾರ್ವಜನಿಕರಿಗೆ ಅಡ್ಡಿಯಾಗದ ರೀತಿ ಈ ವಾಹನ ಓಡಾಟ ನಡೆಯಬೇಕಿದ್ದು, ಈ ಮಾರ್ಗದ ರಸ್ತೆ ಹಾಳಾದಲ್ಲಿ ಅದನ್ನು ಅಣು ವಿದ್ಯುತ್ ಘಟಕದವರು ಸರಿಪಡಿಸಿಕೊಡಬೇಕು ಎಂಬ ಷರತ್ತು ವಿಧಿಸಲಾಗಿದೆ. ಅದರೊಂದಿಗೆ ಈ ಭಾರೀ ವಾಹನಗಳು ಶಾಲಾ ಅವಧಿಯಲ್ಲಿ ಸಂಚರಿಸುವ ಹಾಗಿಲ್ಲ. ಸರಕು ಸಾಮಗ್ರಿಗಳ ವಾಹನದ ಮೇಲೆ ಕಡ್ಡಾಯವಾಗಿ ಹೊದಕೆ ಅಳವಡಿಸಿರಬೇಕು ಎಂಬ ಸೂಚನೆಗಳಿವೆ. ಜೊತೆಗೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಪ್ರತಿನಿತ್ಯ ಸರಕು ವಾಹನಗಳ ಓಡಾಟ ಪರಿಶೀಲಿಸಬೇಕು ಎಂಬ ನಿಬಂಧನೆಯನ್ನು ಹಾಕಲಾಗಿದೆ. ಆದರೆ, ಈ ಎಲ್ಲಾ ಷರತ್ತು-ಸೂಚನೆ-ನಿಬಂಧನೆಗಳನ್ನು ಮೀರಿ ಇಲ್ಲಿ ಭಾರೀ ವಾಹನಗಳ ಓಡಾಟ ಮುಂದುವರೆದಿದೆ.