ರವೀಂದ್ರ ನಗರದಲ್ಲಿದ್ದ ಆಯುಷ್ಮಾನ್ ಆರೋಗ್ಯ ಕೇಂದ್ರ ಬಾಗಿಲು ಮುಚ್ಚಿರುವುದನ್ನು ವಿರೋಧಿಸಿ ಆ ಭಾಗದ ಜನ ಪ್ರತಿಭಟನೆ ನಡೆಸಿದ್ದಾರೆ. ಆಯುಷ್ಮಾನ್ ಆರೋಗ್ಯ ಕೇಂದ್ರಕ್ಕೆ ಬೀಗ ಹಾಕಿರುವುದನ್ನು ಸಮರ್ಥಿಸಿದ ಪತ್ರಿಕಾ ಮಾಧ್ಯಮವೊಂದರ ವಿರುದ್ಧವೂ ಅಲ್ಲಿನವರು ಆಕ್ರೋಶವ್ಯಕ್ತಪಡಿಸಿದ್ದಾರೆ.
`ಮುಂಡಗೋಡ ರಸ್ತೆ ರವೀಂದ್ರ ನಗರದಲ್ಲಿ ಕಳೆದ 5 ವರ್ಷಗಳಿಂದ ಆಯುಷ್ಮಾನ್ ಆರೋಗ್ಯ ಕೇಂದ್ರ ನಡೆಯುತ್ತಿದ್ದು, ಅದು ಸ್ಥಳೀಯರಿಗೆ ಸಾಕಷ್ಟು ಅನುಕೂಲವಾಗಿತ್ತು. ಇಲ್ಲಿ ಕಾರ್ಯನಿರ್ವಹಿಸುವ ವೈದ್ಯರು ತುರ್ತು ಪರಿಸ್ಥಿತಿಯಲ್ಲಿ ಜನರ ಮನೆಗೆ ಭೇಟಿ ನೀಡಿ ಚಿಕಿತ್ಸೆ ನೀಡಿದ ನಿದರ್ಶನಗಳಿದ್ದವು. ಸದ್ಯ ಈ ಕೇಂದ್ರವನ್ನು ಬಂದ್ ಮಾಡಲಾಗಿದೆ. ಅದರಿಂದ ಇಲ್ಲಿನ ಜನ ರಿಕ್ಷಾ ಮಾಡಿ ತಾಲೂಕು ಆಸ್ಪತ್ರೆಗೆ ಹೋಗಬೇಕಿದ್ದು, ಅಲ್ಲಿನ ಪ್ರಯಾಣಕ್ಕೆ 200ರೂ ವೆಚ್ಚವಾಗುತ್ತಿದೆ’ ಎಂದು ಪ್ರತಿಭಟನಾಕಾರರು ವಿವರಿಸಿದರು.
`ಇಲ್ಲಿನ ಆರೋಗ್ಯ ಕೇಂದ್ರ ಬಂದ್ ಮಾಡಬಾರದು ಎಂದು ಮನವಿ ಮಾಡಲಾಗಿತ್ತು. ಆರೋಗ್ಯಾಧಿಕಾರಿಗಳು ಹಾಗೂ ತಹಶೀಲ್ದಾರರಿಗೆ ಸಹ ಇಲ್ಲಿನ ಸಮಸ್ಯೆ ಬಗ್ಗೆ ಮನವರಿಕೆ ಮಾಡಲಾಗಿತ್ತು. ಅದಾಗಿಯೂ, ಆರೋಗ್ಯ ಕೇಂದ್ರ ಬಾಗಿಲು ಮುಚ್ಚಲಾಗಿದೆ. ಇದರಿಂದ ಅನೇಕ ಬಗೆಯ ಆರೋಗ್ಯ ಸೇವೆಗಳಿಗೆ ಜನ ತೊಂದರೆ ಅನುಭವಿಸುತ್ತಿದ್ದಾರೆ’ ಎಂದು ಪಟ್ಟಣ ಪಂಚಾಯತ ಮಾಜಿ ಸದಸ್ಯ ಸೋಮೇಶ್ವರ ನಾಯ್ಕ ಅವರು ದೂರಿದರು. `ಮಾಧ್ಯಮವೊಂದು ಆಸ್ಪತ್ರೆ ಮುಚ್ಚಿರುವುದನ್ನು ಸಮರ್ಥಿಸಿ ವರದಿ ಪ್ರಕಟಿಸಿದೆ. ವರದಿಗಾರರು ಇಲ್ಲಿನ ಸಮಸ್ಯೆ ಬಗ್ಗೆ ಬೆಳಕು ಚೆಲ್ಲಬೇಕು. ಆಸ್ಪತ್ರೆ ಬಂದ್ ಆಗಿರುವುದರಿಂದ ಆದ ತೊಂದರೆಗಳ ಬಗ್ಗೆ ಪ್ರಕಟಿಸಬೇಕು’ ಎಂದವರು ಒತ್ತಾಯಿಸಿದರು.
`ರವೀಂದ್ರ ನಗರ ಹಾಗೂ ಸುತ್ತಮುತ್ತಲಿನ ನಿವಾಸಿಗಳು ಯೋಜನೆಯಡಿ ದೊರೆಯುವ ಸೌಲಭ್ಯಗಳನ್ನು ಪಡೆಯಲು ಈ ಕೇಂದ್ರವನ್ನು ಅವಲಂಬಿಸಿದ್ದಾರೆ. ಎಲ್ಲರಿಗೂ ಆರೋಗ್ಯ ಸೇವೆ ಒದಗಿಸುವ ಉದ್ದೇಶ ಹೊಂದಿರುವ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಕೇಂದ್ರವನ್ನು ಇದೀಗ ಬಂದ್ ಮಾಡಲು ಮುಂದಾಗಿರುವುದು ಸ್ಥಳೀಯರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ’ ಎಂದು ಅಲ್ಲಿನವರು ವಿವರಿಸಿದರು. `ಈ ಕೇಂದ್ರದಲ್ಲಿ ಬಿಪಿ-ಶುಗರ್ ಗುಳುಗೆ ಸುಲಭವಾಗಿ ಸಿಗುತ್ತಿತ್ತು. ಇಲ್ಲಿನ ವೈದ್ಯರು ಅತ್ಯಂತ ಪ್ರೀತಿಯಿಂದ ಜನರ ಜೊತೆ ವರ್ತಿಸುತ್ತಿದ್ದರು. ಸದ್ಯ ಆರೋಗ್ಯ ಕೇಂದ್ರ ಬಂದ್ ಆಗಿದ್ದರಿಂದ ಸಮಸ್ಯೆಯಾಗಿದೆ’ ಎಂದು ಫಲಾನುಭವಿ ಮಹಿಳೆಯೊಬ್ಬರು ಕಷ್ಟ ಹೇಳಿಕೊಂಡರು. ಆ ಭಾಗದ ಸಾವಕ್ಕಾ ಬೋವಿ. ಪುಷ್ಪ ಬಣಗಾರ, ರುಕ್ಮಿಣಿ ನಾಯ್ಕ, ನಾಗರಾಜ ನಾಯ್ಕ, ಚಂದ್ರು ಗೌಡರ್, ಸಿದ್ದು ಯಾಮಕರ್ ಅವರು ಆಸ್ಪತ್ರೆ ಬಾಗಿಲು ತೆರೆಯುವಂತೆ ಒತ್ತಾಯಿಸಿದರು.