ಮಳೆ-ಬೆಳೆ ಸರಿಯಾಗಿಲ್ಲದ ಕಾರಣ ಯಲ್ಲಾಪುರದ ರೈತರೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಕ್ಕಳ ಮದುವೆ ಚಿಂತೆ, ಆರ್ಥಿಕ ಪರಿಸ್ಥಿತಿ ಹದಗೆಟ್ಟಿರುವುದು ಸೇರಿ ಸಾಕಷ್ಟು ಸಮಸ್ಯೆಗೆ ಸಿಲುಕಿದ್ದ ಪುಂಡಲಿಕ್ ಗಾವಡೆ ಅವರು ದುಡುಕು ನಿರ್ಧಾರ ಮಾಡಿದ್ದಾರೆ.
ಯಲ್ಲಾಪುರದ ಸಹಸ್ರಳ್ಳಿಯ ಕಬ್ಬಿನಗುಳಿಯಲ್ಲಿ ಪುಂಡಲಿಕ್ ತುಕಾರಾಮ ಗಾವಡೆ ಅವರು ವಾಸವಾಗಿದ್ದರು. 50 ವರ್ಷದ ಅವರು ಕೃಷಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಈ ವರ್ಷ ಮಳೆ ಚನ್ನಾಗಿಲ್ಲದ ಕಾರಣ ಅವರು ಬೇಸರದಲ್ಲಿದ್ದರು. ಬೆಳೆ ಸಹ ಸರಿಯಾಗಿ ಬೆಳೆಯಲು ಆಗಿಲ್ಲ ಎಂದು ನೋವಿನಲ್ಲಿದ್ದರು. ಇದರೊಂದಿಗೆ ಪುಂಡಲಿಕ ಗಾವಡೆ ಅವರಿಗೆ ಎರಡು ಮಕ್ಕಳಿದ್ದು, ಅವರ ಮದುವೆ ಸಹ ಆಗದ ಚಿಂತೆಯಲ್ಲಿದ್ದರು. ಈ ಎಲ್ಲಾ ಸಮಸ್ಯೆಗಳ ಬಗ್ಗೆ ಅವರು ತಮ್ಮ ಅಳಿಯ, ತೆಲಂಗಾರಿನ ನವೀನ ಸುರೇಶ ಬಾಂದೇಕರ್ ಅವರ ಬಳಿ ಹೇಳಿಕೊಂಡಿದ್ದರು.
ಅಕ್ಟೊಬರ್ 6ರ ಮಧ್ಯಾಹ್ನ 1ಗಂಟೆಯವರೆಗೂ ಮನೆಯಲ್ಲಿದ್ದ ಪುಂಡಲಿಕ್ ಗಾವಡೆ ಅವರು ಅದಾದ ನಂತರ ಬೆಟ್ಟದ ಕಡೆ ಹೋಗಿದ್ದರು. ಮರಳಿ ಮನೆಗೆ ಬಂದಿರಲಿಲ್ಲ. ಸಾಕಷ್ಟು ಹುಡುಕಿದರೂ ಅವರ ಸುಳಿವು ಸಿಕ್ಕಿರಲಿಲ್ಲ. ಅಕ್ಟೊಬರ್ 9ರಂದು ಕಬ್ಬಿನಗುಳಿ ಗ್ರಾಮದ ಅರಣ್ಯ ಪ್ರದೇಶದಲ್ಲಿ ಶವವಾಗಿ ಪತ್ತೆಯಾದರು. ಅಲ್ಲಿದ್ದ ಮರಕ್ಕೆ ಪುಂಡಲಿಕ್ ಗಾವಡೆ ಅವರು ನೇಣು ಹಾಕಿಕೊಂಡು ಸಾವನಪ್ಪಿದ್ದರು. ಶವ ನೋಡಿದ ನವೀನ್ ಬಾಂದೇಕರ್ ಅವರು ಈ ಬಗ್ಗೆ ಪೊಲೀಸರಿಗೆ ಹೇಳಿದ್ದು, ಪೊಲೀಸರು ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಿದರು.